ಕಾರವಾರ: ಇಂದಿನ ಕಾಲದ ಮದುವೆ ಅಂದ್ರೆ ಡ್ಯಾನ್ಸ್, ಸಂಗೀತ ಜೊತೆಯಲ್ಲಿ ಭರ್ಜರಿ ಊಟ, ರಾತ್ರಿ ಸ್ನೇಹಿತರಿಗೆ ಗುಂಡು ಇದಿಷ್ಟೇ ಮದುವೆಯಲ್ಲಿ ಸಾಮಾನ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಮಾತ್ರ ತುಂಬಾನೆ ಡಿಫರೆಂಟ್ ಆಗಿ ಮದುವೆ ನಡೆದಿದೆ.
ಸ್ವಯಂವರದಲ್ಲಿ ಭಾಗಿಯಾಗಿದ್ದ ಯುವಕ ಶಿವ ಧನಸ್ಸು ಮುರಿದು ವಧುವನ್ನು ವರಿಸುವಂತೆ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಕುಮಟಾ ತಾಲೂಕಿನ ಗೋಕರ್ಣದ ಭದ್ರಕಾಳಿ ದೇವಸ್ಥಾನದ ಅರ್ಚಕ ಶ್ರೀಧರ್ ಗೋವಿಂದ ಭಟ್-ಮಮತ ದಂಪತಿಯ ಪುತ್ರಿ ನಿಶಾ ಮದುವೆಯನ್ನು ಅದೇ ಗ್ರಾಮದ ಆಶಾ-ರಾಮದಾಸ್ ಕಾಶಿನಾಥ್ ಕಾಮತ್ ಪುತ್ರ ಗಿರೀಶ್ ಜೊತೆ ಇದೇ ತಿಂಗಳ 19 ರಂದು ನಿಶ್ಚಯ ಮಾಡಲಾಗಿತ್ತು.
ವಧುವಿನ ಕುಟುಂಬದ ಆಸೆಯಂತೆ ಸೀತಾ ಸ್ವಯಂ ವರದಲ್ಲಿ ಪರುಶುರಾಮನ ಧನುಸ್ಸನ್ನು ಯಾರು ಎತ್ತುತ್ತಾರೂ ಅವರಿಗೆ ವಧುವನ್ನು ನೀಡುವ ರೀತಿಯಲ್ಲಿ ಧನಸ್ಸನ್ನು ಮದುವೆ ಮಂಟಪದೊಳಗೆ ಇರಿಸಲಾಗಿತ್ತು. ಅದಕ್ಕಾಗಿ ವರ ಮಹಾಶಯರನ್ನೂ ಆಹ್ವಾನಿಸುವ ರೀತಿಯಲ್ಲಿ ಅವಿವಾಹಿತರನ್ನು ಮದುವೆಗೆ ಆಹ್ವಾನಿಸಲಾಗಿತ್ತು. ಎಲ್ಲರಿಗೂ ಧನುಸ್ಸನ್ನು ಎತ್ತುವಂತೆ ಆಹ್ವಾನ ನೀಡಲಾಯಿತು. ಎಲ್ಲ ಯುವಕರು ಧನಸ್ಸು ತುಂಬಾ ಭಾರವಿದೆ ಎಂಬಂತೆ ನಟಿಸಿ ಸೋಲಪ್ಪಿಕೊಂಡರು. ಕೊನೆಗೆ ಬಂದ ವರ ಗಿರೀಶ್, ಅನಾಯಸವಾಗಿ ಧನಸ್ಸು ಎತ್ತಿ ಬಾಣ ಹೂಡುವಷ್ಟರಲ್ಲಿಯೇ ಬಿಲ್ಲು ಮುರಿದಿದೆ. ವಿಜೇತನಾದ ಗಿರೀಶ್ ವಧು ನಿಶಾರನ್ನು ವರಿಸಿದರು.
ಧನಸ್ಸು ಎತ್ತುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವರ ಗಿರೀಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೀತಾ ಸ್ವಯಂ ವರದಂತೆ ವಿಶಿಷ್ಟ ರೀತಿಯಲ್ಲಿ ವಿವಾಹ ಎಲ್ಲರ ಮೆಚ್ಚುಗೆ ಪಡೆದಿದೆ.