– ವರದಿ ಜಾರಿಯಾದ್ರೆ ರಾಜ್ಯದಲ್ಲಿ ಕೋಮುದಳ್ಳುರಿಗೆ ಸಿಎಂ ಕಾರಣ ಆಗ್ತಾರೆ ಎಂದ ಸಚಿವ
ಬೆಂಗಳೂರು: ಪ್ರಸ್ತುತ ಜಾತಿ ಜನಗಣತಿ (Caste Census) ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಹಬಹುದು. ಏಕೆಂದರೆ ಅವರ ಪಕ್ಷದವರೇ ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಮಾರ್ಮಿಕವಾಗಿ ನುಡಿದಿದ್ದಾರೆ.
ಜಾತಿ ಜನಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಕಾಗಕ್ಕ ಗೂಬಕ್ಕ ಕತೆ ಥರ ಇದೆ. ಈ ವರದಿ ಸಿದ್ದರಾಮಯ್ಯಗೇ (Siddaramaiah) ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ. ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಅವರ ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್ ನಾಯಕರು ಅವರನ್ನು ಕರೆದು ಹೇಳಿದ್ದಾರೆ, ಸಿದ್ದರಾಮಯ್ಯ ಅವರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ ಅನ್ನೋ ನೋವು ಕಾಡುತ್ತೆ ನನಗೆ ಎಂದು ಹೇಳಿದ್ದಾರೆ.
ವರದಿಯನ್ನ ಸಿದ್ದರಾಮಯ್ಯ ತಿರಸ್ಕರಿಸಲಿ:
ಪ್ರಸ್ತುತ ತಂದಿರುವ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಬೇಕು. ಮತ್ತೊಂದು ಸಮೀಕ್ಷೆಯನ್ನು ಮಾಡಿ, ಇನ್ನೂ ಮೂರು ವರ್ಷ ಸಮಯ ಇದೆ ಸಿದ್ದರಾಮಯ್ಯಗೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕ ಆಗಿಲ್ಲ. ಇದೊಂದು ಜೇನುಗೂಡಿಗೆ ಕೈ ಹಾಕಿದಂತೆ, ನಿಮ್ಮ ಪಕ್ಷದವರೇ ಏನೇನೋ ಹಿಡಿದು ತಿವೀತಿದ್ದಾರೆ. ಈ ವರದಿ ಜಾರಿ ಆದ್ರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ವರದಿ ಜಾರಿಯಾದರೆ ಸಿದ್ದರಾಮಯ್ಯ ಒಂಟಿಯಾಗಿ ಹೋಗ್ತಾರೆ. ಆದ್ದರಿಂದ ಈ ವರದಿ ತಿರಸ್ಕರಿಸುವಂತೆ ವಿ. ಸೋಮಣ್ಣ ಮನವಿ ಮಾಡಿದ್ದಾರೆ.
ಜಾತಿ ಜನಗಣತಿ ವರದಿ ಸರಿಯಿಲ್ಲ ಅಂತ ಕಾಂಗ್ರೆಸ್‌ನ 50%-60% ನಾಯಕರು ಹೇಳ್ತಿದ್ದಾರೆ. ಹಲವು ಕಡೆ ಸಮೀಕ್ಷೆ ಮಾಡಿಲ್ಲ, ವರದಿಯಲ್ಲಿ ಮಕ್ಕಿ ಕಾ ಮಕ್ಕಿ ಆಗಿದೆ. ಹೊರೆಯಾದರೂ ಪರವಾಗಿಲ್ಲ ಮತ್ತೊಂದು ಸಮಿತಿ ಮಾಡಿ, ಒಂದು ವರ್ಷದಲ್ಲಿ ಹೊಸ ಸಮೀಕ್ಷೆ ಮಾಡಿಸಿ. ಈಗಿನ ವರದಿ ಜಾರಿಯಾದರೆ ರಾಜ್ಯದಲ್ಲಿ ಕೋಮುದಳ್ಳುರಿ ಆಗುತ್ತೆ, ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಆಗ್ತಾರೆ. ಹೈಕಮಾಂಡ್ ನವ್ರು ಹೇಳಿದ್ರು ಅಂತ ಈ ವರದಿಯ ಜಾರಿ ಮಾಡಿದ್ರೆ ಅದೇ ಸಿದ್ದರಾಮಯ್ಯಗೆ ಮರಣ ಶಾಸಕ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಲೆ ಏರಿಕೆ ದಾಹ ಇಂಗಿಲ್ಲ:
ಇದೇ ವೇಳೆ ಬೆಲೆ ಏರಿಕೆ ಕುರಿತು ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಎಲ್ಲಾ ಪದಾರ್ಥಗಳಿಗೂ ದರ ಏರಿಕೆ ಮಾಡಿದೆ. ಕಾಂಗ್ರೆಸ್‌ನ ದರ ಏರಿಕೆ ದಾಹ ಇನ್ನೂ ಇಂಗಿಲ್ಲ. ಇದಲ್ಲದೇ ಬೆಂಗಳೂರಿನಲ್ಲಿ ಅಡಿಗೆ ನೂರು ರೂಪಾಯಿ ವಸೂಲಿ ಮಾಡ್ತಿದ್ದಾರೆ, ಕಸಕ್ಕೂ ಶುಲ್ಕ ಹಾಕಿದ್ದಾರೆ. ರಾಜ್ಯದ ಬೊಕ್ಕಸ ಖಾಲಿ ಮಾಡಿದ್ರಿ, ಜನರ ಮೇಲೆ ಅನಾವಶ್ಯಕ ಟ್ಯಾಕ್ಸ್ ಹಾಕ್ತಿದ್ದೀರಿ. ಸಿದ್ದರಾಮಯ್ಯ ಏನು ಭರವಸೆ ಕೊಟ್ಟಿದ್ದಾರೋ ಅದರಲ್ಲಿ 1 ಪರ್ಸೆಂಟ್ ಆದ್ರೂ ಈಡೇರಿಸಿ ಎಂದು ತಿವಿದಿದ್ದಾರೆ.