ವಿಜಯಪುರ: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ (Sadhwi Niranjan Jyoti) ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರದ (Vijayapura) ಜುಮನಾಳ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.
ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದೆ. ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರು ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ
ಗಾಯಗೊಂಡ ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಹಾಗೂ ಕಾರು ಚಾಲಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಗುರುವಾರ (ಮಾ.16) ನಡೆದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಸಾಧ್ವಿ ಅವರು ಭಾಗಿಯಾಗಿದ್ದರು. ಕಾರ್ಯಕ್ರಮಗಳ ಬಳಿಕ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಎನ್‌ಹೆಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ನೀಡಿ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 5, 8ನೇ ತರಗತಿ ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಸ್ಕ್ಯಾನಿಂಗ್ ಮುಗಿಸಿ ಹೊರಬಂದ ಸಾಧ್ವಿ ನಿರಂಜನಾ ಜ್ಯೋತಿ ಅವರು ʼಪಬ್ಲಿಕ್ ಟಿವಿʼಗೆ ಸ್ಪಷ್ಟನೆ ನೀಡಿ, ದೇವರ ದಯೆಯಿಂದ ಯಾವುದೇ ಹೆಚ್ಚಿನ ಹಾನಿ ಆಗಿಲ್ಲ. ಅಪಾಘಾತದಲ್ಲಿ ತಲೆ ಮತ್ತು ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಬಲಗಾಲು ಹಾಗೂ ತಲೆಯ ಸಿಟಿ ಸ್ಕ್ಯಾನಿಂಗ್ ಮಾಡಿದ್ದಾರೆ. ಯಾವುದೇ ಗಂಭೀರ ಪೆಟ್ಟು ಆಗಿಲ್ಲ. ಡ್ರೈವರ್ ತಲೆಗೆ ಗಾಯ, ಕಾಲಿಗೆ ಏಟಾಗಿದೆ. ವಾಹನ ಚಾಲಕನ ನಿಯಂತ್ರಣದಿಂದ ಟ್ಯಾಂಕರ್ ಕೆಳಗೆ ನಾವು ಸಿಕ್ಕಿ ಹಾಕಿಕೊಳ್ಳುವುದು ತಪ್ಪಿದಂತಾಗಿದೆ. ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇಲ್ಲ. ನಾನು ಚೆನ್ನಾಗಿದ್ದೇನೆ. ನಡೆಯಲು ಸಾಧ್ಯವಾಗುತ್ತಿದೆ. ಸಣ್ಣ ಪುಟ್ಟ ಪೆಟ್ಟು ಬಿದ್ದು ಗಾಯ ಅಗಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.