ಉಡುಪಿ: ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಭೇಟಿ ನೀಡಿ, ಕಡೆಗೋಲು ಶ್ರೀಕೃಷ್ಣ ದೇವರ ದರ್ಶನ ಪಡೆದರು.
ಪತ್ನಿ ಜ್ಯೋತಿ ಜೋಶಿ ಜೊತೆ ಕೃಷ್ಣಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪರ್ಯಾಯ ಪುತ್ತಿಗೆ ಮಠದಿಂದ ಪ್ರಹ್ಲಾದ್ ಜೋಶಿಗೆ ಗೌರವ ಸಮರ್ಪಿಸಲಾಯಿತು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿಯಾದರು. ಮಠದಲ್ಲೇ ಅನ್ನಪ್ರಸಾದ ಸ್ವೀಕಾರಿಸಿದರು.
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ವಿಚಾರವಾಗಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರದ ಅಧಿಕಾರಿಗಳು ಆರೋಪಿಗೆ ಎಸ್ಕಾರ್ಟ್ ಕೊಟ್ಟಿದ್ದಾರೆ. ಪ್ರೋಟೊಕಾಲ್ ವ್ಯವಸ್ಥೆ ಮಾಡಿ ಚೆಕ್ಕಿಂಗ್ ಇಲ್ಲದೆ ಬಿಟ್ಟಿದ್ದಾರೆ. ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರು ಕೇಳಿಬರುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ರಾಜ್ಯ ಸರ್ಕಾರದ ಮಂತ್ರಿಗಳ ಪಾತ್ರ ಇದೆ ಎನ್ನಲಾಗುತ್ತಿದೆ. ಗೃಹ ಸಚಿವ ಪರಮೇಶ್ವರ್ ಮೊದಲು ಸಿಐಡಿ ತನಿಖೆಗೆ ಕೊಟ್ಟರು. ರಾಮಚಂದ್ರ ರಾವ್ ಡಿಜಿಐ ಆಗಿರುವುದರಿಂದ ಅಡಿಷನಲ್ ಚೀಫ್ ಸೆಕ್ರೆಟರಿಗೆ ಕೊಟ್ಟಿದ್ದೇವೆ ಎಂದರು. ಕಸ್ಟಮ್ ತಪ್ಪಿಸಿ ಪ್ರೋಟೊಕಾಲ್ ಮೂಲಕ ಹೇಗೆ ಕರೆತರಲಾಯಿತು? ಭಾರತ ಸರ್ಕಾರದ ಇಂಟೆಲಿಜೆನ್ಸ್ ಬರುವವರೆಗೆ ನಿಮ್ಮ ಇಂಟೆಲಿಜೆನ್ಸ್ ಏನು ಮಾಡುತ್ತಿತ್ತು? ಈ ಥರದ ಹಲವಾರು ಪ್ರಶ್ನೆಗಳಿವೆ. ಈ ಥರದ ದುಡ್ಡು ಬಂಗಾರಗಳು ಸಮಾಜ ವಿದ್ರೋಹಿ ಕೃತ್ಯಕ್ಕೆ ಬಳಕೆಯಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಇರಬೇಕು. ಸಂಪೂರ್ಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ರೂಪಾಯಿ ಚಿಹ್ನೆ ನಿರಾಕರಿಸಿದ ಡಿಎಂಕೆ ಸಿಎಂ ಸ್ಟಾಲಿನ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಮಾಡಿರುವುದು ದುರ್ದೈವವೇ ಸರಿ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ರೂಪಾಯಿ ಸಿಂಬಲ್ ಮೋದಿ ಮಾಡಿದ್ದಾ? ಬಿಜೆಪಿ ಮಾಡಿದ್ದಾ? ಕಾಂಗ್ರೆಸ್ ಸರ್ಕಾರ ಇರುವಾಗ ಆಗಿದ್ದಲ್ವಾ? ಇವರೆಲ್ಲ ಆಗ ಮಂತ್ರಿಗಳಾಗಿದ್ದರು. ಎ.ರಾಜ, ದಯಾನಿಧಿ ಮಾರನ್, ಎಲ್ಲರೂ ಸರ್ಕಾರದಲ್ಲಿದ್ದರು. ಯಾಕೆ ಈ ತೀರ್ಮಾನ ತೆಗೆದುಕೊಂಡ್ರಿ? ಕಾಂಗ್ರೆಸ್‌ನ ಚಿದಂಬರA ವಿತ್ತ ಸಚಿವರಾಗಿದ್ದರು. ಹಾಗಾದ್ರೆ ಸಿಂಬಲ್ ಅನ್ನು ಮಾಡಿದ್ದು ಯಾರು? ಕಾಂಗ್ರೆಸ್ ಮತ್ತು ಅವರ ಸ್ನೇಹಿತ ಪಕ್ಷಗಳು ರಾಜಕೀಯವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ. ತಥಾಕಥಿತ ಇಂಡಿ ಘಟಬಂಧನ್ ಮಾಡೋದೇ ಹೀಗೆ. ನೀವು ಮಾಡಿದ ಸಿಂಬಲ್‌ಗೆ ನಮ್ಮ ಅಭ್ಯಂತರ ಏನೂ ಇರಲಿಲ್ಲ. ಈ ಚಿಹ್ನೆಯನ್ನು ಡಿಸೈನ್ ಮಾಡಿದ್ದು ಕೂಡ ತಮಿಳುನಾಡಿನವನು. ನಿಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಈ ರೀತಿ ಹೇಳಿಕೆ ನೀಡಬೇಡಿ ಕಿಡಿಕಾರಿದರು.
ಡಿಎಂಕೆ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಈ ರೀತಿ ಮಾತನಾಡುತ್ತೀರಿ. ರೂಪಾಯಿ ಬದಲಿಸುತ್ತೀರಿ. ತ್ರಿಭಾಷಾ ಸೂತ್ರ ಮಾಡಿರೋದು ಯಾರು? ನೆಹರೂ ಕಾಲದಿಂದ ಇದೆ. ಹೊಸ ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರ ಮಾಡಲು ಹೇಳಿದ್ದೇವೆ. ನಾವು ಹಿಂದಿ ಇರಬೇಕು ಅಂತ ಹೇಳಿದ್ದೇವೆವಾ? ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ ವಂಚನೆ ಮಾಡಿ ತಮ್ಮ ವೈಫಲ್ಯತೆಯನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಟೀಕಿಸಿದರು.