ಧಾರವಾಡ: ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ದಿಕ್ಕು, ದಾರಿ ತಪ್ಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಒಬ್ಬರ ವಿರುದ್ಧ ಒಬ್ಬರು ಹೇಳಿಕೆ ಕೊಡಿಸುತ್ತಿದ್ದಾರೆ. ಹೆಚ್ಚು ಡಿಸಿಎಂ ಸ್ಥಾನ ಸೃಷ್ಟಿ ಮಾಡಬೇಕು ಎಂಬ ಒತ್ತಾಯ ಎಬ್ಬಿಸುತ್ತಿದ್ದಾರೆ. ಇದನ್ನು ಸಿಎಂ ತಮ್ಮ ಬಾಲಂಗೋಚಿಗಳ ಕಡೆಯಿಂದ ಹೇಳಿಸುತ್ತಿದ್ದಾರೆ. ಇತ್ತ ಸಿಎಂ ಅವರನ್ನೇ ಬದಲಾವಣೆ ಮಾಡಿಸಬೇಕು ಎಂದು ಡಿಸಿಎಂ ತಮ್ಮ ಹಿಂಬಾಲಕರ ಕಡೆಯಿಂದ ಹೇಳಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದ್ರೆ ಡಿಕೆಶಿ ಸಿಎಂ ಆಗ್ತಾರೆ: ಜಿಟಿ ದೇವೇಗೌಡ
ಈ ಸರ್ಕಾರ ದಾರಿ ತಪ್ಪಿದ ಮಗನಂತಾಗಿದೆ. ಒಬ್ಬರಿಗೊಬ್ಬರು ತಮ್ಮ ಹಿಂಬಾಲಕರನ್ನು ಬಿಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳತ್ತದೆ ಎನ್ನುತ್ತಾರೆ. ಏನು ಹೇಳಿದರೂ ಕ್ರಮ ಆಗಿಲ್ಲ. ಇಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ. ಒಂದೇ ವರ್ಷದಲ್ಲಿ ಕಾಂಗ್ರೆಸ್ ಹೀಗಾಗಿದೆ. ಗ್ಯಾರಂಟಿ ಕೊಟ್ಟರೂ ಲೋಕಸಭೆಯಲ್ಲಿ ಬಹುಪಾಲು ಬಿಜೆಪಿ ಮುಂದೆ ಇದೆ. ಕಾಂಗ್ರೆಸ್ ಬಗ್ಗೆ ಜನ ಬೇಸತ್ತಿದ್ದಾರೆ. ರಾಜ್ಯದ ಆಡಳಿತ ನಿಷ್ಟ್ರಿಯಗೊಳ್ಳುತ್ತಿದೆ. ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ಕೊಡಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇವರು ಕೂಡಲೇ ತಮ್ಮ ಆಂತರಿಕ ಸಮಸ್ಯೆ ಬಗೆಹರಿಸಿಕೊಂಡು ಜನರ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಬೆಲೆ ಏರಿಕೆ ಮಾಡಿ ಜನರಿಂದಲೇ ಹಣ ಪೀಕಿ ಅದೇ ದುಡ್ಡನ್ನು ಜನರಿಗೆ ಕೊಡುತ್ತಿದ್ದಾರೆ. ಒಂದು ಕೈಯಿಂದ ಕಸಿದುಕೊಂಡು ಇನ್ನೊಂದು ಕೈಯಿಂದ ಕೊಡುತ್ತಿದೆ. ಸಿದ್ದರಾಮಯ್ಯ ಒಬ್ಬ ವಿಫಲ ಮುಖ್ಯಮಂತ್ರಿ ಎಂದ ಜೋಶಿ, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುತ್ತದೆ ಎಂಬ ಗುಮಾನಿ ಬಗ್ಗೆ ನಾನು ಮೊದಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗಲೂ ಪ್ರತಿಕ್ರಿಯಿಸಲಾರೆ. ಜನ ಅವರಿಗೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಜನತೆಯ ಆದೇಶ ಐದು ವರ್ಷ. ಈ ಅವಧಿಯಲ್ಲಿ ಅವರು ಚೆನ್ನಾಗಿಯೇ ಆಡಳಿತ ಮಾಡಲಿ ಎಂಬುದೇ ನಮ್ಮ ಉದ್ದೇಶ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮುಂದಿನ 2 ಗಂಟೆಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಅವರವರ ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಅದಕ್ಕೆ ಇವರು ಆಪರೇಶನ್ ಕಮಲ ಎನ್ನುತ್ತಾರೆ. ಆ ವಿಚಾರ ನಮ್ಮ ತಲೆಯಲ್ಲಿಲ್ಲ ಎಂದರಲ್ಲದೇ. ಸಮಾಜ ವಿಜ್ಞಾನ ಪಠ್ಯದಲ್ಲಿ ವೀರಶೈವ ಪದ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ ಮತ್ತೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಎಂದು ಮೊದಲು ಹೇಳಿತ್ತು. ಈಗ ವೀರಶೈವ ಪದ ತೆಗೆದಿದೆ. ಅನಗತ್ಯವಾಗಿ ಕಿಚ್ಚು ಹಚ್ಚುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.