ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಕನ್ನಡಿಗರಿಗೆ ದ್ರೋಹ: ರಾಜ್ಯಸಭೆ ಸಂಸದ ಜಿ.ಸಿ ಚಂದ್ರಶೇಖರ್ ಆಕ್ರೋಶ

Public TV
3 Min Read
G.C.Chandrashekhar

ನವದೆಹಲಿ: ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ (Pralhad Joshi) ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ. ದೆಹಲಿಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರ ಓಲೈಸುವ ರಾಜಕೀಯ ಮಾಡುತ್ತಿದ್ದು, ರಾಜ್ಯಕ್ಕೆ ಅವರ ಕೊಡುಗೆ ಶೂನ್ಯ ಎಂದು ರಾಜ್ಯಸಭೆ ಸಂಸದ ಜಿ.ಸಿ ಚಂದ್ರಶೇಖರ್ (G.C.Chandrashekhar) ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆಡಳಿತ ಪಕ್ಷಕ್ಕಿಂತ ಕಲಾಪ ವಿರೋಧ ಪಕ್ಷಕ್ಕೆ ಮುಖ್ಯ. ಜನಪರ ಧ್ವನಿ ಎತ್ತಲು ಕಲಾಪ ನಮಗೆ ವೇದಿಕೆ. ಆದರೆ, ನಮಗೆ ಇಲ್ಲಿ ಅವಕಾಶ ಸಿಗುತ್ತಿಲ್ಲ. ಧನ್ಕರ್ ಅವರ ಅವಧಿಯಲ್ಲಿ ಹೆಚ್ಚು ಕಾಲ ಕಲಾಪ ಮುಂದೂಡಿಕೆಯಾಗಿದೆ. ಇದನ್ನೂ ಓದಿ: ಸಂಸತ್‌ ಭವನ ಮೇಲಿನ ದಾಳಿಗೆ 23 ವರ್ಷ – ಹುತಾತ್ಮಕರಿಗೆ ಮೋದಿ ಸೇರಿ ಗಣ್ಯರಿಂದ ನಮನ

Pralhad Joshi

ವೆಂಕಯ್ಯನಾಯ್ಡು ಅವರು ಹೀಗೆ ತಾರತಮ್ಯ ಮಾಡಿರಲಿಲ್ಲ. ಅವರು ನ್ಯಾಯಾಧೀಶರ ರೀತಿ ವರ್ತಿಸಬೇಕು. ಆದರೆ, ಅವರು ಆಡಳಿತ ಪಕ್ಷಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಮೈಕ್ ಆನ್ ಮಾಡಲ್ಲ, ಕ್ಯಾಮೆರಾದಲ್ಲಿ ತೋರಿಸಲ್ಲ. ಎಲ್ಲ ಸದಸ್ಯರಿಗೂ ತಮ್ಮದೇ ಆದ ಗೌರವ ಇರುತ್ತೆ. ಎಲ್ಲರಿಗೂ ಇಲ್ಲಿ ಗೌರವ ಕೊಡಬೇಕು. ನಮ್ಮದು ಬಹುಮತ ಇಲ್ಲ ಅಂತಾ ಅವಿಶ್ವಾಸ ಮಂಡನೆ ಮಾಡಬಾರದು ಅಂತಲ್ಲ. ಜನ ವಿರೋಧಿ ನೀತಿಗಳನ್ನು ಖಂಡಿಸಲು ನಾನು ನಮ್ಮ ಜವಾಬ್ದಾರಿ ನಿಭಾಯಿಸಬೇಕು. ಸಭಾಪತಿ ಅವರಿಗೆ ಎಚ್ಚರಿಕೆ ನೀಡಲು ನಾವು ಇದನ್ನು ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಲಾಪಗಳು ಮುಂದೂಡಿಕೆ ಬಗ್ಗೆ ನಮಗೂ ಬೇಸರ ಇದೆ. ಬಜೆಟ್ ತಯಾರಾಗುವ ಸಮಯ ಇದು. ಈ ಸಮಯದಲ್ಲಿ ಕರ್ನಾಟಕದ ಬಗ್ಗೆ ಗಮನ ಸೆಳೆಯಬೇಕು. ಆದರೆ, ರಾಜ್ಯದ ಕೇಂದ್ರ ಸಚಿವರು, ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ನೀರಾವರಿ ಯೋಜನೆ ಸೇರಿ ಪ್ರಮುಖ ಯೋಜನೆ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷಪಾತ ಬಿಟ್ಟು ರಾಜ್ಯಕ್ಕೆ ಆಗುವ ಅನ್ಯಾಯ ಖಂಡಿಸಬೇಕಿದೆ. ನಮಗೆ ಮಾತನಾಡಲು ಬಿಡುತ್ತಿಲ್ಲ. ಆಡಳಿತದಲ್ಲಿರುವ ಬಿಜೆಪಿ ನಾಯಕರಾದರೂ ರಾಜ್ಯದ ಬಗ್ಗೆ ಮಾತನಾಡಬೇಕು ಅವರು ಮಾತನಾಡುತ್ತಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ 3 ಸಾವಿರ ಹೊಸ ಅಂಗನವಾಡಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ- ಲಕ್ಷ್ಮಿ ಹೆಬ್ಬಾಳ್ಕರ್

Narendra Modi Amit Shah

ಪ್ರಹ್ಲಾದ್ ಜೋಶಿ ಹಿರಿಯ ಸಚಿವರಾಗಿದ್ದಾರೆ. ಆದರೆ ಅವರು ಮೋದಿ, ಅಮಿತ್ ಶಾ ಖುಷಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಮಹದಾಯಿಯಿಂದ ಎಷ್ಟು ಜನಕ್ಕೆ ಅನುಕೂಲ, ಅದನ್ನು ಮಾಡುವ ಪ್ರಯತ್ನ ಮಾಡುತ್ತಿಲ್ಲ. ಕೇವಲ ಅಲ್ಲಿಂದ ಇಲ್ಲಿಗೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಹಿರಿಯ ಸಚಿವರಾಗಿ ಪ್ರಹ್ಲಾದ್‌ ಜೋಶಿ ಕೊಡುಗೆ ಶೂನ್ಯ. ಅವರಿಂದ ಕನ್ನಡಿಗರಿಗೆ ದ್ರೋಹವಾಗುತ್ತಿದೆ ಎಂದು ಹೇಳಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಬಗ್ಗೆ ಮಾತನಾಡಿ, ಇದು ಸರಿಯಾದ ಚಿಂತನೆಯಲ್ಲ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಧಿಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಸಂವಿಧಾನ ರಾಜ್ಯಕ್ಕೆ ನೀಡಿದ ಸ್ವಾತಂತ್ರ್ಯ ಕಿತ್ತುಕೊಳ್ತಿದೆ. ರಾಜ್ಯಗಳನ್ನು ತನ್ನ ಗುಲಾಮಗಿರಿ ವ್ಯಾಪ್ತಿಗೆ ತರುವ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿ ಇದನ್ನು ಮಾಡುವುದು ಸುಲಭ ಅಲ್ಲ. ಪ್ರತಿ ರಾಜ್ಯಕ್ಕೂ ತನ್ನದೇ ಆದ ವೈವಿಧ್ಯತೆ ಇದೆ. ಅದಕ್ಕೆ ತಕ್ಕಂತೆ ಚುನಾವಣೆ ಮಾಡಬೇಕು.

ಮೊದಲು ಇದನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಜನರು, ವಿರೋಧ ಪಕ್ಷಗಳು ಒಮ್ಮತಕ್ಕೆ ಬರಬೇಕು. ಬಳಿಕ ಕಮಿಟಿ ಮಾಡಿ, ವರದಿ ಮಾಡಿ ಅಮೇಲೆ‌ ಮಂಡಿಸಬೇಕು. ಹಣಕಾಸು ಉಳಿಬಹುದು ಎನ್ನುವುದು ನಾನು ಒಪ್ಪುವೆ. ಆದರೆ ಇಂದು ಚುನಾವಣೆಗೆ ಎಷ್ಟು ವ್ಯಯವಾಗುತ್ತಿದೆ ಅದನ್ನು ನಿಲ್ಲಿಸಲು ಯಾಕೆ ಕ್ರಮ ತೆಗೆದುಕೊಳ್ಳಬಾರದು? ಅಭ್ಯರ್ಥಿ ಬದಲು ಸರ್ಕಾರ ಹಣ ವ್ಯಯ ಮಾಡಲಿ. ಪ್ರಧಾನಿಯೂ ಎಷ್ಟು ಖರ್ಚು ಮಾಡುತ್ತಾರೆ ಎಂದು ಎಲ್ಲ ಜನರಿಗೆ ಗೊತ್ತಿದೆ. ಈ ಚುನಾವಣಾ ವ್ಯವಸ್ಥೆಯಲ್ಲಿ ಹಣಕಾಸು ಬಳಕೆ ನಿರ್ಬಂಧಿಸಿ. ಆ ಮೇಲೆ ಮುಂದಿನ ಹಂತಕ್ಕೆ ಬರಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆ ಅನುಮೋದನೆಗೆ ಮನವಿ

Share This Article