ಧಾರವಾಡ: ಹೊಸ ಸಂಚಾರಿ ನಿಯಮ ಜಾರಿಯಾಗಿದ್ದರೂ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಮಾತ್ರ ಯಾವುದಕ್ಕೂ ಡೋಂಟ್ ಕೇರ್ ಎಂದು ತಾವಿರಲಿ, ತಮ್ಮ ಚಾಲಕನಿಗೂ ಸಹ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸುವುದಿಲ್ಲ.
ಇಂದು ಧಾರವಾಡದ ಹೊಸ ಬಸ್ ನಿಲ್ದಾದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ಮಾಡಲು ಕಾರಿನಲ್ಲಿ ಬಂದಿದ್ದ ಸಚಿವರು ಬೆಲ್ಟ್ ಹಾಕಿರಲಿಲ್ಲ. ಸಚಿವರಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಹಾಕಿರಲಿಲ್ಲ.
Advertisement
Advertisement
ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಕೂಡಲೇ ದಂಡವನ್ನು ಕಡಿಮೆ ಮಾಡಿ ಇಲ್ಲವೇ ರಸ್ತೆಗಳನ್ನು ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಕೇಂದ್ರ ಸಚಿವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಕಾರಿನಲ್ಲಿ ರಾಜಾರೋಷವಾಗಿ ಪ್ರಯಾಣ ಮಾಡುತ್ತಿದ್ದಾರೆ.
Advertisement
ನಿಯಮವನ್ನು ಜಾರಿಗೆ ತಂದ ಕೇಂದ್ರ ಸಚಿವ ಸಂಪುಟದ ಸಚಿವರೇ ನಿಯಮವನ್ನು ಪಾಲಿಸುತ್ತಿಲ್ಲ ಇವರಿಗೆ ದಂಡ ಹಾಕುವವರು ಯಾರು? ನಿಯಮ ಅಂದಮೇಲೆ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ, ಸಾರ್ವಜನಿಕರಿಗೆ ವಿನಾಕಾರಣ ಕ್ಯಾತೆ ತೆಗೆಯೋ ಪೊಲೀಸರು ಸಚಿವರ ವರಸೆ ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಅವರದ್ದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರಿ ನಿಯಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ರಾಜಕಾರಣಿಗಳು ಸೀಟ್ ಬೆಲ್ಟ್ ಧರಿಸದೆ, ಕಾರಿನಲ್ಲಿ ಪ್ರಯಾಣಿಸುತ್ತಾರೆ ಎಂಬುದರ ಕುರಿತು ಬೆಳಕು ಚೆಲ್ಲಲಾಗಿತ್ತು.