Connect with us

Latest

ಗಡ್ಕರಿಗೆ ಸುಪ್ರೀಂ ಬುಲಾವ್- ಆದ್ರೆ ಇದು ಮನವಿಯೇ ಹೊರತು ಸಮನ್ಸ್ ಅಲ್ಲ

Published

on

ನವದೆಹಲಿ: ಮಾಲಿನ್ಯ ನಿಯಂತ್ರಣದ ಸಂಬಂಧ ಎಲೆಕ್ಟ್ರಿಕ್ ವಾಹನ ಜಾರಿ ಸಂಬಂಧ ಹೊಸ ವಿಚಾರಗಳನ್ನು ಹಂಚಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಸುಪ್ರೀಂ ಕೋರ್ಟ್ ಇಂದು ವಿನಂತಿಸಿದೆ. ಸಚಿವರ ಅಭಿಪ್ರಾಯ ಆಲಿಸಲು ನಾವು ವಿನಂತಿ ಮಾಡುತ್ತಿದ್ದೇವೆ ಹೊರತು ಇದು ವಿಚಾರಣೆಗೆ ಹಾಜರಾಗುವಂತೆ ಮಾಡುವ ಸಮನ್ಸ್ ಅಲ್ಲ ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.

ಸಚಿವ ನಿತಿನ್ ಗಡ್ಕರಿ ಅವರಿಗೆ ಮಾಲಿನ್ಯ ನಿಯಂತ್ರಣದ ಕುರಿತು ನವೀನ ವಿಚಾರಗಳಿವೆ. ಸಾರಿಗೆ ಸಚಿವರೇ ಬಂದು ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನದ ಯೋಜನೆಯ ಬಗ್ಗೆ ನಮಗೆ ಮಾಹಿತಿ ನೀಡಬಹುದೇ? ಅಧಿಕಾರಿಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಯೋಜನೆಯ ಸ್ಪಷ್ಟ ಚಿತ್ರಣ ಇರುವುದರಿಂದ ಸಚಿವರನ್ನು ಕರೆಸಿ ಮಾಹಿತಿ ತಿಳಿದುಕೊಳ್ಳುವುದು ಉತ್ತಮ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ನೀತಿ ಅನುಷ್ಠಾನಗೊಳಿಸುವ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ.ಬೊಬ್ಡೆ, ನ್ಯಾ.ಬಿಆರ್ ಗವಿ, ನ್ಯಾ. ಸೂರ್ಯಕಾಂತ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

ವಿಚಾರಣೆ ಸಂದರ್ಭದಲ್ಲಿ ಸಚಿವರು ನ್ಯಾಯಾಲಯಕ್ಕೆ ಬಂದು ನಮಗೆ ಸಹಾಯ ಮಾಡಬೇಕು ಎಂದು ನಾವು ವಿನಂತಿಸುತ್ತಿದ್ದೇವೆ. ಏಕೆಂದರೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದಾರೆ. ಹೀಗಾಗಿ ಕಲಾಪಕ್ಕೆ ಹಾಜರಾಗಬೇಕು ಎಂದು ನ್ಯಾ.ಬೊಬ್ಡೆ ಕೇಳಿಕೊಂಡರು.

ಈ ವಿನಂತಿಯನ್ನು ಇದನ್ನು ರಾಜಕೀಯ ರೀತಿಯಲ್ಲಿ ನೋಡುವ ಸಾಧ್ಯತೆಯಿದೆ ಎಂದು ಸರ್ಕಾರಿ ವಕೀಲರು ಕೋರ್ಟ್ ಗಮನಕ್ಕೆ ತಂದಾಗ, ಮುಖ್ಯ ನ್ಯಾಯಮೂರ್ತಿಗಳು, “ನಾವು ಅವರನ್ನು ಕರೆಸಿಕೊಳ್ಳುತ್ತಿದ್ದೇವೆ ಎಂದು ಭಾವಿಸಬೇಡಿ. ಇದು ಒಂದು ವಿನಂತಿಯಾಗಿದೆ. ಅಧಿಕಾರದಲ್ಲಿರುವ ಯಾರಾದರೂ ನಿರ್ಧರಿಸಬೇಕೆಂದು ನಾವು ಬಯಸುತ್ತೇವೆ. ದಯವಿಟ್ಟು ಚರ್ಚೆಗೆ ಬರುವಂತೆ ಅವರಿಗೆ ತಿಳಿಸಿ” ಎಂದು ಸೂಚಿಸಿದರು.

ನಾವು ಸರ್ಕಾರಕ್ಕೆ ಯಾವುದೇ ಆದೇಶಗಳನ್ನು ನೀಡುತ್ತಿಲ್ಲ. ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸರ್ಕಾರದ ಯೋಜನೆಗಳನ್ನು ನಾವು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.

ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಪ್ರಶಾಂತ್ ಭೂಷಣ್, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂದ ಶುಲ್ಕ ವಿಧಿಸಬಹುದು. ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಸಹಾಯಧನ ನೀಡಬಹುದು ಎಂದು ಸಲಹೆ ನೀಡಿದರು.

ಮಾಲಿನ್ಯದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ವೇಳೆ ಸ್ಪಷ್ಟವಾಗಿ ಹೇಳಿದೆ. ಈ ವಿಷಯ ದೆಹಲಿ ಎನ್‍ಸಿಆರ್‍ಗೆ ಮಾತ್ರವಲ್ಲ, ಇಡೀ ದೇಶಕ್ಕೂ ಮುಖ್ಯವಾಗಿದೆ ಎಂದ ಕೋರ್ಟ್ ಅರ್ಜಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

Click to comment

Leave a Reply

Your email address will not be published. Required fields are marked *