– ಗದ್ದೆಯಲ್ಲೇ ಮುದ್ದೆ ಸವಿದ ಕೇಂದ್ರ ಸಚಿವ
ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು (H.D Kumaraswamy) ಪಾಂಡವಪುರದ ಅರಳಕುಪ್ಪೆ ಗ್ರಾಮದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ರೈತರೊಬ್ಬರ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದಾರೆ.
ಭತ್ತ ನಾಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‍ಎಸ್ ಡ್ಯಾಂ (KRS Dam) ಭರ್ತಿಯಾಗಿದೆ. ಹೀಗಾಗಿ ಅರಳಕುಪ್ಪೆ ಗ್ರಾಮಕ್ಕೆ ಬಂದು ಭತ್ತ ನಾಟಿ ಮಾಡುವಂತೆ ರೈತರು ಮನವಿ ಮಾಡಿದ್ದರು. ರೈತ ಮಹಿಳೆಯರ ಜೊತೆಗೂಡಿ ಲಕ್ಷ್ಮಣ್ ಎಂಬವರ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ್ದೇನೆ. ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ನಾಟಿ ಮಾಡಿದ್ದೆ. ಈಗ ಕೇಂದ್ರದ ಮಂತ್ರಿ ಆಗಿದ್ದೇನೆ. ರೈತರಿಗೆ ಆತ್ಮಸೈರ್ಯ ತುಂಬಲು ಈ ರೀತಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಭೂಮಿ ತಾಯಿ ಮಕ್ಕಳಾದ ನಮ್ಮೆಲ್ಲರಿಗೂ ಭೂಮಿಯೇ ಸರ್ವಸ್ವ. ಬೇಸಾಯವೇ ಬದುಕು. ಭತ್ತದ ನಾಟಿ ನನ್ನ ಮನೆಯ ಕಾರ್ಯಕ್ರಮವೇ ಆಗಿತ್ತು. ರೈತಾಪಿ ಜನರೊಂದಿಗೆ ಇಂತಹ ಸಾರ್ಥಕ, ಅನನ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನಲ್ಲಿ ಧನ್ಯತೆಯ ಭಾವ ಉಂಟು ಮಾಡಿದೆ ಎಂದಿದ್ದಾರೆ.
ಬಳಿಕ ಗದ್ದೆಯಲ್ಲಿಯೇ ಅವರು ಮುದ್ದೆ ಊಟ ಸವಿದಿದ್ದಾರೆ. ಈ ವೇಳೆ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಹೆಚ್‍ಡಿಕೆ ಅವರಿಗೆ ಸಾಥ್ ನೀಡಿದರು. ಈ ಹಿಂದೆ 2018ರಲ್ಲೂ ಕಾವೇರಿ ಮಾತೆಗೆ ಪೂಜೆ ಮಾಡಿ ಅವರು ಭತ್ತ ನಾಟಿ ಮಾಡಿದ್ದರು.