ನವದೆಹಲಿ: ನಕಲಿ ಗಾಂಧಿಗಳ ಪಕ್ಷ ಈಗ ಬೆಳಗಾವಿಯಲ್ಲಿ ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಲೇವಡಿ ಮಾಡಿದರು.
ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಅತ್ಯಾಚಾರ, ದರೋಡೆಗಳು ನಡೆಯುತ್ತಿವೆ. ಅಪರಾಧಿ ಚಟುವಟಿಕೆಗಳು ಮಿತಿ ಮೀರಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರಿಗೆ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು.
Advertisement
Advertisement
ಸರ್ಕಾರದಲ್ಲಿ ಒಬ್ಬ ತಹಸಿಲ್ದಾರ್, ಉಪ ವಿಭಾಗಾಧಿಕಾರಿಯನ್ನು ನಿಯಂತ್ರಣ ಮಾಡುವುದು ಇವರಿಗೆ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಮೇಲೆ ನಿಯಂತ್ರಣ ಇಲ್ಲ. ಕಾಂಗ್ರೆಸ್ಸಿನವರು ಕರ್ನಾಟಕವನ್ನು ಸಂಪೂರ್ಣ ಮುಗಿಸಲಿಕ್ಕೇ ಬಂದಿದ್ದಾರೆ. ಇದೇನಾ ಗಾಂಧಿ ತತ್ವದ ಆಡಳಿತ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವರು ಗುಡುಗಿದರು.
Advertisement
ರಾಜ್ಯದಲ್ಲಿ ಗರ್ಭಿಣಿಯರ ಸರಣಿ ಸಾವಿನ ಪ್ರಕರಣಗಳ ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿಲ್ಲ ಯಾಕೆ? ಯಾಕೆ ಅಷ್ಟು ಜನ ತಾಯಂದಿರು, ನವಜಾತ ಶಿಶುಗಳು ಬಲಿಯಾದದ್ದು? ಇಲ್ಲಿಯೂ 40% ಕಮಿಷನ್ ಎನ್ನುವ ಮಾತು ಕೇಳಿ ಬರುತ್ತಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಯಾವ ರೀತಿ ಬಳಕೆ ಮಾಡುತ್ತಿದ್ದೀರಿ? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಇ-ಖಾತಾ ಹೆಸರಲ್ಲೂ ಸರ್ಕಾರ ಲೂಟಿ ಹೊಡೆಯುತ್ತಿದೆ. ರೇರಾ ಬಗ್ಗೆಯೂ ಜನ ಅನುಮಾನದಿಂದ ಮಾತಾಡುತ್ತಿದ್ದಾರೆ. ಈಗಿನ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿ ಅವರ ಹೆಸರು ಇಡುವ ಯೋಗ್ಯತೆ ಇಲ್ಲ. ಈಗಿನ ಕಾಂಗ್ರೆಸ್ಸಿಗೂ ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ ಬೇರೆ ಇದೆ. ಇವರು ಮೊನ್ನೆ ಬೆಳಗಾವಿಯಲ್ಲಿ ನಡೆದು ಅರ್ಧಕ್ಕೆ ಅಂತ್ಯವಾಗಿದ್ದ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಕಳಸವಾದ ಜಮ್ಮು- ಕಾಶ್ಮೀರದ ಭೂಪಟವೇ ಇರಲಿಲ್ಲ. ಇಂಥ ಇವರು ದೇಶ ಜೋಡಿಸುವವರಾ? ಕಾಂಗ್ರೆಸ್ ಪಕ್ಷಕ್ಕೆ ಅಂತಿಮವಾದ ಚರಮಗೀತೆ ಕರ್ನಾಟಕದಲ್ಲಿ ಆಗುತ್ತದೆ, ನೋಡುತ್ತೀರಿ ಎಂದು ಸಚಿವರು ಕಿಡಿಕಾರಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳು ಆಗಿಯೇ ಇರಲಿಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಹೊಣೆಗೇಡಿತನದಿಂದ ಕೂಡಿದೆ. ಹಿಂದೆ ಅತ್ಯಾಚಾರ ಪ್ರಕರಣಗಳು ನಡೆದಿವೆ. ಈಗಲೂ ನಡೆಯಲಿ ಎನ್ನುವುದೇ ಅವರ ಭಾವನೆಯೇ? ಹಿಂದೆ ಆಗಿರುವ ಕೆಟ್ಟದ್ದನ್ನು ಸರಿಪಡಿಸುವುದು ಮುಖ್ಯವೇ ಹೊರತು, ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಲ್ಲ. ಸಿಎಂ ಅಪರಾಧ ನಿಯಂತ್ರಣ ಮಾಡುವುದು ಬಿಟ್ಟು ಸಬೂಬು ಹೇಳುತ್ತಿದ್ದಾರೆ. ಇವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ಗ್ಯಾಂಗ್‌ರೇಪ್ ಪ್ರಕರಣಗಳ ಜೊತೆಗೆ ಕಾನೂನು ಸುವ್ಯವಸ್ಥೆ ಏನಾಗಿದೆ? ಆಡಳಿತ ಎಷ್ಟರ ಮಟ್ಟಿಗೆ ಕುಸಿದಿದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗಾಂಧಿ ಹೆಸರು ಹೈಜಾಕ್ ಮಾಡಿದ್ದಾರೆ
ಬೆಳಗಾವಿ ಕಾಂಗ್ರೆಸ್ ಸಮಾವೇಶ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು, ಬಾಪು, ಸಂವಿಧಾನ, ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಈಗ ನೆನಪು ಮಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಇವರು ಏನು ಸಾಧನೆ ಮಾಡಿದ್ದಾರೆ? ಗಾಂಧಿ ಅವರ ಹೆಸರು ಹೈಜಾಕ್ ಮಾಡಿದ್ದಾರೆ. ಗಾಂಧಿ ಕುಟುಂಬ ಎಂದರೆ ಮಹಾತ್ಮಾ ಗಾಂಧಿ ಕುಟುಂಬ ಅಲ್ಲ, ಇಂದಿರಾ ಗಾಂಧಿ ಅವರು ಬಂದ ಮೇಲೆ ಗಾಂಧಿ ಹೆಸರನ್ನು ಹೈಜಾಕ್ ಮಾಡಿದ್ದಾರೆ. ಈಗ ಇರುವವರು ಯಾರೂ ಗಾಂಧಿಗಳು ಅಲ್ಲ ಎಂದು ಸಚಿವರು ಕಿಡಿಕಾರಿದರು.
ದೇಶಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ದೊಡ್ಡದು
ನಮ್ಮ ಸಂವಿಧಾನಕ್ಕೆ ಯಾರಿಂದ ಅಪಚಾರ ಆಗಿದೆ? ಎನ್ನುವುದು ದೇಶಕ್ಕೆ ಗೊತ್ತಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಎಷ್ಟು ಹಿಂದೆ ಕೊಟ್ಟಿದೆ ಎನ್ನುವುದಕ್ಕೆ ಸುದೀರ್ಘ ಇತಿಹಾಸವಿದೆ. ಇವತ್ತು ನರೇಂದ್ರ ಮೋದಿ ಅವರ ಸರ್ಕಾರ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಗಾಂಧೀಜಿಗೆ ಜಾಹೀರಾತು ಮೂಲಕ ಅಪಚಾರ
ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿ ಮತ್ತು ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹಕ್ಕೆ ಅಪಚಾರ ಎಸಗಿದೆ. ಸತ್ಯಾಗ್ರಹದಲ್ಲಿ ಮಹಾತ್ಮರನ್ನು ಹಿಂಬಾಲಿಸಿದ್ದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಚಿತ್ರಗಳನ್ನು ತೆಗೆದು, ಆ ಚಿತ್ರವನ್ನು ತಿರುಚಿದೆ. ಮಹಾತ್ಮರ ಹಿಂದೆ ಸಿಎಂ, ಡಿಸಿಎಂ ಅವರು ಸತ್ಯಾಗ್ರಹದಲ್ಲಿ ಭಾಗಿ ಆಗಿದ್ದರು ಎನ್ನುವಂತೆ ತಿರುಚಿ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಇತಿಹಾಸವನ್ನು ಕಾಂಗ್ರೆಸ್ ಹೇಗೆ ತಿರುಚಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇವರು ಕೊಟ್ಟಿರುವ ಜಾಹೀರಾತಿನಂತೆ ಕಾಂಗ್ರೆಸ್‌ನವರು ಯಾವ ಗಾಂಧಿ ತತ್ವ ಅನುಸರಿಸುತ್ತಿದ್ದಾರೆ? ಯಾವ, ಯಾರ ಆದರ್ಶ ಪಾಲನೆ ಮಾಡಲಾಗುತ್ತಿದ್ದಾರೆ? ಯಾವ ಗಾಂಧಿ ತತ್ವದ ಮೇಲೆ ಕರ್ನಾಟಕದಲ್ಲಿ ಆಡಳಿತ ನಡೆಯುತ್ತಿದೆ? ರಾಜ್ಯದಲ್ಲಿ ಆಡಳಿತವೇ ಕುಸಿದಿದೆ. ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣ.. ಎಷ್ಟು ಹಗರಣಗಳ ಪಟ್ಟಿ ಬೇಕು? ಇದಾ ಆಡಳಿತ ಎಂದು ಕಿಡಿಕಾರಿದರು.