– ಮೈಸೂರಿಗೆ ನನ್ನ ಅವಧಿಯಲ್ಲೂ ಕೊಡುಗೆ ಕೊಟ್ಟಿದ್ದೇನೆ, ಹಾಗಂತ ನನ್ನ ಹೆಸರಿಡಿ ಅನ್ನೋಕಾಗುತ್ತಾ?
ಮೈಸೂರು: ಇಡೀ ಕರ್ನಾಟಕಕ್ಕೆ ಸಿದ್ದರಾಮಯ್ಯ (Siddaramaiah) ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರೆ ಇಟ್ಟು ಬಿಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕಿಡಿಕಾರಿದರು.
ಮೈಸೂರಿನಲ್ಲಿ (Mysuru) ಕೆಆರ್‌ಎಸ್ ರಸ್ತೆಗೆ ಸಿಎಂ ಹೆಸರು ಇಡುವ ವಿಚಾರವಾಗಿ ಮಾತನಾಡಿದ ಅವರು, ಮಹಾರಾಜರ ಮನೆತನಕ್ಕೆ ಸರ್ಕಾರ ಯಾಕೆ ಅಪಮಾನ ಮಾಡ್ತಿದೆ? ಸಿಎಂ ಈ ವಿಚಾರದಲ್ಲಿ ಜಾಣ ಮೌನದಲ್ಲಿದ್ದಾರೆ. ತಮ್ಮ ಬೆಂಬಲಿಗರ ಛೂ ಬಿಟ್ಟು ರಸ್ತೆಗೆ ತಮ್ಮ ಹೆಸರಿಡಿಸಿಕೊಳ್ತಿದ್ದಾರೆ. ಸಿದ್ದರಾಮಯ್ಯ ಹೆಸರನ್ನು ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಇಡಲಿ. ಇಡೀ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರೇ ಇಟ್ಟು ಬಿಡಲಿ. ಈ ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಕೈ ಬಿಡಬೇಕು ಎಂದು ಗರಂ ಆದರು ಹೆಚ್‌ಡಿಕೆ, ಮೈಸೂರಿಗೆ ನನ್ನ ಅವಧಿಯಲ್ಲೂ ಬಹಳ ಕೊಡುಗೆ ಕೊಟ್ಟಿದ್ದೇನೆ. ಹಾಗಂತ ನನ್ನ ಹೆಸರಿಡಿ ಎಂದು ಕೇಳಲು ಆಗುತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 1999-2024ರ ವರೆಗಿನ ಕಡತಗಳಲ್ಲಿ ಕೆಆರ್‌ಎಸ್ ರಸ್ತೆಗೆ ಪ್ರಿನ್ಸಸ್ ಹೆಸರಿಲ್ಲ: ಮೈಸೂರು ಪಾಲಿಕೆ ಆಯುಕ್ತ
ಜೆಡಿಎಸ್ ಜೊತೆ ಜಿ.ಟಿ.ದೇವೇಗೌಡ ಮುನಿಸು ಕುರಿತು ಮಾತನಾಡಿ, ಜನತಾದಳಕ್ಕೂ ಜಿಟಿಡಿಗೂ ಗಂಡ-ಹೆಂಡತಿ ಸಂಬಂಧ ಇದ್ದ ರೀತಿ. ಜಗಳ ಮುನಿಸು ನಡೆಯುತ್ತವೆ. ಸಂಬಂಧವೇನೂ ಮುರಿಯುವುದಿಲ್ಲ. ಆಯಾ ಸಂದರ್ಭಕ್ಕೆ ಜಿಟಿಡಿ ಅನ್ನಿಸಿದ್ದನ್ನು ಹೇಳುತ್ತಾರೆ. ಅಷ್ಟಕ್ಕೆ ನಮ್ಮ ಅವರ ಸಂಬಂಧ ಮುಗಿಯಿತು ಅಂತಾ ಅರ್ಥ ಅಲ್ಲ. ಜಿಟಿಡಿ ಯಾವ ಪಕ್ಷಕ್ಕೂ ಹೋಗಲ್ಲ. ನಮ್ಮಲ್ಲೇ ನಮ್ಮ ಜೊತೆಯೇ ಇದ್ದಾರೆ. ನಮ್ಮ ಪಕ್ಷದ 18 ಶಾಸಕರ ಶಕ್ತಿ ಕಾಂಗ್ರೆಸ್‌ಗೆ ಗೊತ್ತಿದೆ. ಹೀಗಾಗಿ, ನಮ್ಮ ಶಾಸಕರ ಒಗ್ಗಟ್ಟು ಮುರಿಯುವ ಯತ್ನ ಆಗಾಗ ಮಾಡ್ತಾ ಇರುತ್ತಾರೆ. ಇದರಲ್ಲಿ ಅವರು ಯಶಸ್ವಿ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸರ್ಕಾರ. ಸರ್ಕಾರ ನಡೆಸುವವರಿಗೆ ನೈತಿಕತೆಯೇ ಇಲ್ಲ. ಭ್ರಷ್ಟಾಚಾರ ಎಲ್ಲಾ ಕಡೆಯೂ ತಾಂಡವಾಡ್ತಿದೆ. ಅಮಾಯಕರು ಮೃತಪಡ್ತಿದ್ದಾರೆ. ಸಿದ್ದರಾಮಯ್ಯ ಐದು ವರ್ಷವೂ ನಾನೇ ಸಿಎಂ ಆಗಿ ಇರ್ತೀನಿ ಅನ್ನೋ ರೀತಿ ಮಾತಾಡ್ತಿದ್ದಾರೆ. ಅದು ಅವರ ಪಕ್ಷದ ವಿಚಾರ. ನಾವು ಸುಮ್ಮನೆ ಎಲ್ಲವನ್ನೂ ನೋಡ್ತಿದ್ದೇವೆ ಎಂದರು. ಇದನ್ನೂ ಓದಿ: ವಿವಾದ ಇಲ್ಲಿಗೆ ಮುಗಿಸೋಣ – ಸಿಎಂ ಹೆಸರು ಸಮರ್ಥಿಸಿದ್ದ ಪ್ರತಾಪ್ ಸಿಂಹ ಯೂ ಟರ್ನ್
ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಆಂತರಿಕ ಚುನಾವಣೆ ಮೂಲಕ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಮಾಡ್ತೀವಿ. ಸದ್ಯಕ್ಕೆ ನಿಖಿಲ್ ನೇಮಕದ ವಿಚಾರ ನಮ್ಮ ಪಕ್ಷದೊಳಗೆ ಚರ್ಚೆ ಆಗಿಲ್ಲ. ಜ.12 ರಂದು ಪಕ್ಷದ ಸಭೆಯಲ್ಲಿ ಆಂತರಿಕ ಚುನಾವಣೆ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ತಿಳಿಸಿದರು.