Connect with us

Districts

ಕೈ ಪರ ಮತಯಾಚಿಸಿದ ಚಂಪಾಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟ ಅನಂತ್ ಕುಮಾರ್: ವಿಡಿಯೋ ನೋಡಿ

Published

on

ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ದಿನದಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿ ಕಾಂಗ್ರೆಸ್ ಗೆ ಮತ ನೀಡಿ ಎಂದಿದ್ದ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಅವರಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಆಕ್ರೋಶ ಭರಿತವಾಗಿ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ.

ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತಾನಾಡಿದ ಅನಂತ್ ಕುಮಾರ್, ಈ ವೇದಿಕೆ ರಾಜಕೀಯ ಭಾಷಣ ಮಾಡಲು ಅಲ್ಲ. ಯಾರಿಗೆ ಮತ ಹಾಕಬೇಕು ಅನ್ನುವುದನ್ನು ಹೇಳುವುದಕ್ಕೆ ಬೇರೆ ವೇದಿಕೆಗಳಿವೆ ಅಲ್ಲಿ ಹೇಳಿ. ಕನ್ನಡ ಸಮ್ಮೇಳನದಲ್ಲಿ ಕನ್ನಡ ದ ಬಗ್ಗೆ ಮಾತನಾಡಿ. ಇಡೀ ದೇಶವೇ ಸಮ್ಮೇಳವನ್ನು ನೋಡುತ್ತಿದೆ. ಹೀಗಿರುವಾಗ ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳದಲ್ಲಿ ಡೋಂಗಿತನಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ವೇದಿಕೆಯ ಮೌಲ್ಯ ಹಾಳಾಗುತ್ತದೆ ಎಂದು ನೇರವಾಗಿ ಹೇಳಿದರು.

ತಮ್ಮ ಭಾಷಣದ ಉದ್ದಕ್ಕೂ ಚಂಪಾ ಹೇಳಿಕೆಗೆ ತಮ್ಮ ಮೊಣಚು ಭಾಷಣದ ಮೂಲಕ ಕೇಂದ್ರ ಸಚಿವ ಟಾಂಗ್ ನೀಡಿದರು. ವೇದಿಕೆ ಮೇಲೆ ಕನ್ನಡದ ಬಗ್ಗೆ ಚರ್ಚೆ ಮಾಡಿ, ರಾಜಕೀಯ ಬೇಡ. ಕಸಾಪ ಸ್ಥಾಪನೆ ಮಾಡಿದ ರಾಜಮನೆತನಕ್ಕೆ ಸಮ್ಮೇಳಕ್ಕೆ ಆಹ್ವಾನ ನೀಡದೇ ಅವಮಾನ ಮಾಡಿದ್ದು ಸರಿಯಲ್ಲ. ನಾವು ನಾಡು, ನುಡಿ, ಜಲ, ನೆಲದ ವಿಷಯಕ್ಕೆ ಬಂದಾಗ ಪಕ್ಷತೀತವಾಗಿ ಕೆಲಸ ಮಾಡಿದ್ದೇವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ವಿಷಯದಲ್ಲೂ ಹೋರಾಡಿದ್ದೇವೆ. ಕನ್ನಡದ ವಿಷಯಕ್ಕೆ ಬಂದಾಗ ಎಲ್ಲಕ್ಕೂ ಸಿದ್ಧ. ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇವೆ ಎಂದು ಹೇಳಿ ತಿರುಗೇಟು ನೀಡಿದರು.

ಈ ವೇಳೆ ವೇದಿಕೆ ಮೇಲಿದ್ದ ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅನಂತ್ ಕುಮಾರ್ ಭಾಷಣವನ್ನು ಲೈವ್ ಮಾಡಿದ್ದು ವಿಶೇಷವಾಗಿತ್ತು. ಭಾಷಣ ಮುಗಿಯುತ್ತಿದಂತೆ ಸಮ್ಮೇಳನದ ಪ್ರತಿಕ್ರಿಯೆಯನ್ನು ಅಲಿಸದ ಅನಂತ್ ಕುಮಾರ್ ಹಾಗೂ ಪ್ರತಾಪ್ ಸಿಂಹ ವೇದಿಕೆಯಿಂದ ನಿರ್ಗಮಿಸಿದರು.

ಅನಂತ್ ಕುಮಾರ್ ಅಕ್ರೋಶದ ಭಾಷಣ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಫೇಸ್‍ಬುಕ್ ನಲ್ಲಿ ಲೈವ್ ಮಾಡಿದ್ದು ನೋಡಿ ಚಂಪಾಗೆ ತಿರುಗೇಟು ನೀಡಲು ಸಿದ್ಧರಾಗಿಯೇ ಬಿಜೆಪಿ ನಾಯಕರು ವೇದಿಕೆಯನ್ನು ಏರಿದ್ದಾರೆ ಎನ್ನುವ ಅಭಿಪ್ರಾಯ ಜನರಲ್ಲಿ ಮೂಡಿತ್ತು.

ಚಂಪಾ ಹೇಳಿದ್ದು ಏನು?: ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಾತಂತ್ರ್ಯ, ಸಮಾನತೆ, ಸಹಭಾವ, ಸೆಕ್ಯುಲರಿಸಂ, ಸಾಮಾಜಿಕ ನ್ಯಾಯ ಮುಂತಾದವುಗಳಿಗೆ ಕಂಟಕ ಒದಗಿಬಂದಿದೆ ಎಂಬ ಆತಂಕ ವ್ಯಕ್ತಪಡಿಸಿದ್ರು. ಅಲ್ಲದೇ ನಮ್ಮ ರಾಜ್ಯದ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಸೆಕ್ಯುಲರ್ ಪಕ್ಷಗಳ ಪರವಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದ್ದರು.

ಒಂದು ರಾಷ್ಟ್ರೀಯ ಪಕ್ಷ ಕನ್ನಡದ ಪರ ಕೆಲಸ ಮಾಡುತ್ತಿದೆ. ಆದರೆ, ಇನ್ನೊಂದು ರಾಷ್ಟ್ರೀಯ ಪಕ್ಷವು ನಾಡಧ್ವಜ ವಿವಾದ, ಮೆಟ್ರೋದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯೆತ್ತುತ್ತಿ ಮೌನ ತಾಳಿದೆ. ಈ ಚುನಾವಣೆಯಲ್ಲಿ ಆ ಪಕ್ಷವನ್ನು ಜನ ದೂರವಿಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಮತ ಹಾಕುವಂತೆ ನೆರೆದಿದ್ದ ಜನತೆಗೆ ಕರೆಕೊಟ್ಟಿದ್ದರು.

ಕನ್ನಡ ಸಂಸ್ಕೃತಿಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಕಡುವೈರಿಯಾಗಲು ಕೇಂದ್ರ ಸರಕಾರದ ನೀತಿಯೇ ಕಾರಣವಾಗಿದೆ. ಒಂದೇ ಭಾಷೆ-ಒಂದೇ, ಧರ್ಮ-ಒಂದೇ ಸಿದ್ಧಾಂತ ಎಂಬ ಧಾಟಿಯಲ್ಲಿ ನಾವೆಲ್ಲ ಒಕ್ಕೊರಲಿನಿಂದ ಹಾಡುತ್ತಿದ್ದ ವಂದೇಮಾತರಂ ಗೀತೆಯನ್ನೇ ಹೈಜಾಕ್ ಮಾಡಲಾಗಿದೆ. ಭಾರತ ಮಾತೆ, ಬರೀ ಹಿಂದೂ ಮಾತೆ ಆಗುತ್ತಿರುವಳೇ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಶ್ನೆ ಮಾಡುವುದೇ ರಾಷ್ಟ್ರದ್ರೋಹವಾಗಿ, ವೈಚಾರಿಕತೆ ಮೇಲೆ ಹಲ್ಲೆ ಎಸಗುವುದೇ ಸಂಸ್ಕೃತಿಯಾಗಿ, ದಟ್ಟ ಭಯ ಆವರಿಸಿದೆ ಎಂದಿದ್ದರು.

 

 

Click to comment

Leave a Reply

Your email address will not be published. Required fields are marked *