– ಪೂರ್ವಿಕರು ಸ್ವಾಂತಂತ್ರ್ಯದ ಸಮಯದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು
– ನಮ್ಮ ಕುಟಂಬದಂತೆ ದೇಶದಲ್ಲಿ ಬಿಜೆಪಿಯನ್ನು ಒಪ್ಪುವ ವಾತಾವರಣ ನಿರ್ಮಾಣವಾಗ್ತಿದೆ
ಕಾರವಾರ: ಕಾಂಗ್ರೆಸ್ಸಿನ ಕಟ್ಟಾ ಅಭಿಮಾನಿಗಳಾಗಿದ್ದ ತಮ್ಮ ಕುಟುಂಬದವರು ಬಿಜೆಪಿಯಿಂದ ಸ್ಪರ್ಧಿಸಿದ್ದಕ್ಕೆ ನನಗೆ ಬೈದಿದ್ದರು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕಾರವಾರದ ದೇವಳಮಕ್ಕಿಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ನಮ್ಮ ಮನೆಯಲ್ಲಿ ಬಿಜೆಪಿಗೆ ವೋಟು ಹಾಕುವುದೇ ಗೊತ್ತಿರಲಿಲ್ಲ. ನನಗೆ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಕ್ಕಾಗ ಮನೆಯಲ್ಲಿ ಬೈದಿದ್ದರು. ನಮ್ಮ ಪೂರ್ವಿಕರು ಸ್ವಾತಂತ್ರ್ಯ ಹೋರಾಟದ ವೇಳೆ ಕಾಂಗ್ರೆಸ್ ಜೊತೆಗೆ ಬಂದವರು. ಹೀಗಾಗಿ ನೀನು ಕಾಂಗ್ರೆಸ್ ಬಿಟ್ಟು ಹೋಗಿದ್ದೀಯ ಅಂದ್ರೆ ಅದು ನಮ್ಮ ಮನೆತನಕ್ಕೆ ಕಳಂಕವೆಂದು ದೂರಿದ್ದರು ಎಂದು ಹಳೆಯ ನೆನಪನನ್ನು ಹೊರಹಾಕಿದ್ದಾರೆ.
Advertisement
Advertisement
ನಾನು ಕಳೆದ ಐದು ಬಾರಿ ಚುನಾವಣೆಗೆ ನಿಂತಿದ್ದರೂ ನನ್ನ ತಂದೆ ನನಗೆ ಮೋಟು ಹಾಕಿದ್ದಾರೆಂದು ಗೊತ್ತಿಲ್ಲ. ಅವರು ಕಾಂಗ್ರೆಸ್ಸಿನ ಕಟ್ಟಾ ಅಭಿಮಾನಿಗಳು. ಆದರೆ ಈ ಬಾರಿ ನನ್ನ ಬಳಿಗೆ ಬಂದು ಬಿಜೆಪಿಗೆ ವೋಟು ಹಾಕುತ್ತೇನೆ. ಆದರೆ ನಿನ್ನನ್ನ ನೋಡಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೋಡಿ ಎಂದರು. ಆಗ ನಾನು, ಅಷ್ಟಾದರೂ ದೇವರು ಬುದ್ಧಿ ಕೊಟ್ಟಿದ್ದಾನಲ್ಲ ಎಂದು ಅವರಿಗೆ ಕೈ ಮುಗಿದೆ ಎಂದು ಆ ಕ್ಷಣವನ್ನು ಬಿಚ್ಚಿಟ್ಟರು.
Advertisement
ನಮ್ಮ ಕುಟಂಬದಂತೆ ದೇಶದ ಎಲ್ಲ ಕಡೆಯೂ ಬಿಜೆಪಿಯನ್ನು ಜನರು ಒಪ್ಪಿಕೊಳ್ಳುವ ವಾತಾವರಣ ಬೆಳೆಯುತ್ತಿದೆ. ಬೇರೆ ಬೇರೆ ಪಕ್ಷಗಳ ನಾಯಕರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‍ನವರಿಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಕಾರವಾರದಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಾಧ್ಯವಾಗದೇ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗುತ್ತಿದೆ. 2014ರ ಲೋಕಸಭಾ ಚುನಾವಣೆ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ 28.5 ಸಾವಿರ ಜನ ಬಿಜೆಪಿ ಕಾರ್ಯಕರ್ತರಿದ್ದರು. ಆದರೆ ಈ ಬಾರಿ ಫೋನ್ ಮೂಲಕ ಅನೇಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರ ಸಂಖ್ಯೆ 1.47 ಲಕ್ಷಕ್ಕೆ ಏರಿಕೆ ಕಂಡಿದೆ. ಆದರೆ ನೋಂದಣಿ ಮಾಡಿಸಿಕೊಂಡ ಕಾರ್ಯಕರ್ತರು ಎಲ್ಲಿದ್ದಾರೆ ಎನ್ನುವುದು ನಮಗೂ ಗೊತ್ತಿಲ್ಲ. ಅವರ ಫೋನ್ ನಂಬರ್, ಹೆಸರು ನಮ್ಮ ಬಳಿ ಇದೆ ಎಂದು ಅನಂತಕುಮಾರ್ ಹೆಗ್ಡೆ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv