ಬೆಳಗಾವಿ: ನವೆಂಬರ್ 10 ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಬಿಜೆಪಿ ನಾಯಕರ ಹೆಸರನ್ನು ಕೈಬಿಟ್ಟು ಹೊಸ ಆಹ್ವಾನ ಪತ್ರಿಕೆ ಮುದ್ರಿಸಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದ ಸುರೇಶ್ ಅಂಗಡಿ ಅವರು ಈ ಹಿಂದೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸುವುದು ಬೇಡ ಎಂದು ತಿಳಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
Advertisement
ಪತ್ರ ಬರೆದಿದ್ದರೂ ಬೆಳಗಾವಿ ಜಿಲ್ಲಾಡಳಿತ ಶಿಷ್ಟಾಚಾರದ ಪ್ರಕಾರ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಇಬ್ಬರು ನಾಯಕರ ಹೆಸರನ್ನು ಪ್ರಕಟಿಸಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿತ್ತು. ಆದರೆ ಈಗ ಸರ್ಕಾರ ನಿರ್ದಿಷ್ಟ ಪ್ರಕರಣಗಳಲ್ಲಿ ತಮ್ಮ ಹೆಸರನ್ನು ನಮೂದಿಸದಂತೆ ಜನಪ್ರತಿನಿಧಿಗಳು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಲ್ಲಿ ಆ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಹೆಸರನ್ನು ಕೈಬಿಟ್ಟು ಹೊಸದಾಗಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದೆ.
Advertisement
ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಶಿಷ್ಟಾಚಾರದ ಪ್ರಕಾರ ನಾವು ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಹಾಕುತ್ತೇವೆ. ಈ ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಬಿಜೆಪಿ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದರು.
Advertisement
ಅನಂತ್ ಕುಮಾರ ಹೆಗಡೆ ಪ್ರತಿಕ್ರಿಯಿಸಿ, ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿ ಮುದ್ರಿಸಬೇಡಿ ಎಂದು ಹೇಳಿದ್ದೇನೆ. ಒಂದು ವೇಳೆ ಹೆಸರನ್ನು ಮುದ್ರಿಸಿದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಟಿಪ್ಪು ನಿಜ ಬಣ್ಣವನ್ನು ಬಯಲು ಮಾಡುತ್ತೇನೆ ಎಂದು ತಿಳಿಸಿದ್ದರು.
Advertisement
ಮೈಸೂರಿನಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ್ ಸಿಂಹ, ಇದೀಗ ಟಿಪ್ಪು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ತೆಗೆಯುವ ಮೂಲಕ ಸಿಎಂ ನಮ್ಮ ಹೋರಾಟಕ್ಕೆ ಹೆದರಿದ್ದಾರೆ. ನಾವು ಕಾರ್ಯಕ್ರಮಕ್ಕೆ ಬಂದರೆ ಟಿಪ್ಪುವಿನ ನಿಜಬಣ್ಣ ಬಯಲಾಗುತ್ತದೆ ಎಂಬ ಭಯ ಅವರಿಗಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದರು.
ಇದನ್ನೂ ಓದಿ: ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ
ಇದನ್ನೂ ಓದಿ: ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣ-ಸಚಿವ ಅನಂತ್ ಕುಮಾರ್ ಹೆಗಡೆ ಹೀಗಂದ್ರು