ಕೇಂದ್ರದಿಂದ ರಾಜ್ಯಕ್ಕೆ 1,029.39 ಕೋಟಿ ರೂ. ಬರ ಪರಿಹಾರ ಬಿಡುಗಡೆ

Public TV
2 Min Read
amit shah 3

ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌)ನಿಂದ ರಾಜ್ಯಕ್ಕೆ 1,029.39 ಕೋಟಿ ರೂ. ಬರ ಪರಿಹಾರ ಹಣ ಬಿಡುಗಡೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ಉನ್ನತ ಸಭೆಯ ನಡೆದಿತ್ತು. ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಇಂದು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಒಟ್ಟು 4,432.10 ಕೋಟಿ ರೂ. ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ.

2019ರಲ್ಲಿ ಸಂಭವಿಸಿದ ಭೂಕುಸಿತ, ಹಿಮಪಾತ, ಆಲಿಕಲ್ಲು ಮಳೆ ಮತ್ತು ಫೋನಿ ಚಂಡ ಮಾರುತ ತಂದ ವಿಪತ್ತುಗಳಿಗೆ ಎನ್‌ಡಿಆರ್‌ಎಫ್‌ ಹಣವನ್ನು ಬಿಡುಗಡೆ ಮಾಡಲಾಗಿದೆ. 2018-19ರಲ್ಲಿ ಫೋನಿ ಚಂಡಮಾರುತಕ್ಕೆ ಒಡಿಶಾ ಸಾಕಷ್ಟು ನಷ್ಟ ಅನುಭವಿಸಿತ್ತು. ಅಲ್ಲದೇ ರಾಜ್ಯವು ತೀವ್ರ ಬರ ಎದುರಿಸಿತ್ತು. ಹೀಗಾಗಿ ಒಡಿಶಾ ರಾಜ್ಯಕ್ಕೆ 3,338.22 ಕೋಟಿ ರೂ. ನೀಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಉಂಟಾದ ಆಲಿಕಲ್ಲು ಮಳೆ ಹಾಗೂ ಹಿಮ ಕುಸಿತಕ್ಕೆ ಭಾರೀ ಹಾನಿಯಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು  ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ರೂ. ಬಿಡುಗಡೆ ಮಾಡಿದೆ.

Drought copy

ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ನಿಂದ ಈ ಹಿಂದೆ ಬಿಡುಗಡೆಯಾಗಿದ್ದ ಹಣಕ್ಕಿಂತಲೂ ಹೆಚ್ಚು ಪರಿಹಾರವನ್ನು ಈ ಬಾರಿ ಬಿಡುಗಡೆ ಮಾಡಿದೆ. 2018-19ರ ಅವಧಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಒಟ್ಟು 9,658 ಕೋಟಿ ರೂ. ಬಿಡುಗಡೆ ಮಾಡಿತ್ತು. 2019-20ರಿಂದ ಇಲ್ಲಿಯವರೆಗೆ ಈಗಾಗಲೇ 6,104 ಕೋಟಿ ರೂ.ವನ್ನು 24 ರಾಜ್ಯಗಳಿಗೆ ನೀಡಲಾಗಿದೆ.

ತೀವ್ರ ಪ್ರವಾಹಕ್ಕೆ ಸಿಲುಕಿದ್ದ ರಾಜ್ಯವು ಪ್ರವಾಹ ಪರಿಹಾರ ನಿರೀಕ್ಷೆಯಲ್ಲಿತ್ತು. ಆದರೆ ಪ್ರವಾಹ ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರವು ಬರ ಪರಿಹಾರ ಬಿಡುಗಡೆ ಮಾಡಿದೆ. ಇತ್ತ ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಕೇರಳ, ತ್ರಿಪುರಾ, ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ ಹಾಗೂ ಕೇರಳ ರಾಜ್ಯಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಭಾರೀ ಹಾನಿ ಉಂಟಾಗಿದೆ. ಈ ರಾಜ್ಯಗಳು ಪ್ರವಾಹ ಪರಿಹಾರ ನಿರೀಕ್ಷೆಯಲ್ಲಿವೆ.

amit shah blg

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ನೀರಿನ ಹರಿವು ಕಡಿಮೆಯಾದ ನಂತರ ಎಷ್ಟು ನಷ್ಟವಾಗಿದೆ ಅಂತ ಅಂದಾಜು ಮಾಡಲಾಗುತ್ತಿದೆ. ಹೀಗಾಗಿ ಮಳೆ ಪ್ರಮಾಣ ಹಾಗೂ ನದಿಗಳ ಪ್ರವಾಹ ತಗ್ಗಿದ ಮೇಲೆ ಗೃಹ ಇಲಾಖೆಯಿಂದ ರಾಜ್ಯಕ್ಕೆ ಸಮಿತಿ ಬರಲಿದೆ. ಸಮಿತಿ ಅಧ್ಯಯನ ನಡೆಸಿದ ಬಳಿಕ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ವೈಮಾನಿಕ ವಿಕ್ಷಣೆ ಮಾಡಿದರು. ಅವರ ಭೇಟಿಯು ಕರ್ನಾಟಕದ ಬಗ್ಗೆ ಅವರಿಗೆ ಇರುವ ವಿಶೇಷ ಕಾಳಜಿಯನ್ನು ತೋರುತ್ತದೆ. ಹೀಗಾಗಿ ಹೆಚ್ಚಿನ ಪರಿಹಾರ ಧನ ಸಿಗುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *