-ಕರ್ನಾಟಕದ ಗೆಲುವಿನ ಗುಟ್ಟು ಬಿಚ್ಚಿಟ್ಟ ಬಿಎಸ್‍ವೈ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮುಂದುವರಿಯಲಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಹಾಗೂ ಸಂಘಟನಾತ್ಮಕ ನೋಂದಣಿ ಕಾರ್ಯಗಳ ಹಿನ್ನೆಲೆ ಅಮಿತ್ ಶಾ ಅವರನ್ನೇ ಮುಂದಿನ ಆರು ತಿಂಗಳವರೆಗೆ ಮುಂದುವರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಅಧ್ಯಕ್ಷರ ಬದಲಾವಣೆ ಹಿನ್ನೆಲೆ ಇಂದು ಎಲ್ಲ ರಾಜ್ಯಗಳ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ನವದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜ್ಯಗಳ ರಾಜ್ಯಾಧ್ಯಕ್ಷರು, ರಾಷ್ಟ್ರೀಯ, ರಾಜ್ಯ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಭಾಗಿಯಾಗಿದ್ದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಮೂರು ಹಂತದಲ್ಲಿ ಸರಣಿ ಸಭೆಗಳು ನಡೆದವು. ಮೊದಲ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಸಂಬಂಧ ಚರ್ಚೆ ಮಾಡಲಾಯಿತು. ಮುಂದಿನ ಆರು ತಿಂಗಳಲ್ಲಿ ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ನಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಅಮಿತ್ ಶಾ ಅವರನ್ನೇ ಮುಂದುವರಿಸಲು ತಿರ್ಮಾನಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಸಭೆಗೆ ರಾಜ್ಯದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಶಾಸಕರಾದ ಅರವಿಂದ್ ಲಿಂಬಾವಳಿ, ಸಿ.ಟಿ ರವಿ ಭಾಗಿಯಾಗಿದ್ದರು. ಈ ವೇಳೆ ಲೋಕಸಭೆ ಚುನಾವಣಾ ಸಂಬಂಧಿಸಿದಂತೆ ರಾಜ್ಯದ ವರದಿಯನ್ನು ಅಮಿತ್ ಶಾ ಗೆ ಬಿಎಸ್‍ವೈ ನೀಡಿದರು. ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿದ್ದರಿಂದ ಬಿಜೆಪಿಗೆ ಹೆಚ್ಚಿನ ಲಾಭ ಆಗಿದೆ. ಮೈತ್ರಿ ನಾಯಕರ ಒಳ ಜಗಳ ಹಾಗೂ ಸರ್ಕಾರದ ವೈಫಲ್ಯಗಳನ್ನು ಬಿಜೆಪಿ ನಾಯಕರು ಸಂಘಟನಾತ್ಮಕ ಬಳಸಿಕೊಂಡಿದ್ದು ದೊಡ್ಡಮಟ್ಟದ ಗೆಲುವಿಗೆ ಸಹಕಾರಿಯಾಗಿದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದು ಬಿಎಸ್‍ವೈ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗಿದ್ದು, ಸರಣಿ ಸಭೆ ಹಿನ್ನೆಲೆ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕ ಸಭೆಗೆ ಅಮಿತ್ ಶಾ ಸಮಯ ನೀಡಲಿಲ್ಲ. ಎರಡನೇ ಸಭೆಯಲ್ಲಿ ಪಕ್ಷದ ಮುಂದಿನ ಬೆಳಗಣಿಗೆ ನಿಟ್ಟಿನಲ್ಲಿ ಅಮಿತ್ ಶಾ ಬಿಜೆಪಿ ನಾಯಕರಿಗೆ ಸಲಹೆಗಳನ್ನು ನೀಡಿದ್ದು, ಮುಂದಿನ ಆರು ತಿಂಗಳಲ್ಲಿ 15% ಪಕ್ಷದ ಸದಸ್ಯತ್ವ ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ ಮೂಲಗಳು ತಿಳಿಸಿವೆ.