Connect with us

Bengaluru City

ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಕೇಂದ್ರ ಗೃಹ ಇಲಾಖೆ

Published

on

ಬೆಂಗಳೂರು: ಐಪಿಎಸ್ ಹುದ್ದೆಗೆ ಅಣ್ಣಾಮಲೈ ಸಲ್ಲಿಸಿದ್ದ ರಾಜೀನಾಮೆಯನ್ನು ಕೇಂದ್ರ ಗೃಹ ಇಲಾಖೆ ಇಂದು ಅಂಗೀಕರಿಸಿದೆ.

2011ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಮೇ 28ರಂದು ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದನ್ನೂ ಓದಿ:  ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ

ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ್ದ ಅಣ್ಣಾಮಲೈ, ನಾನು ಸರ್ವಿಸ್‍ಗೆ ಸೇರಿ 9 ವರ್ಷಗಳು ಕಳೆದವು. ಆದರೆ ನಾನು ನನ್ನ ಕುಟುಂಬಕ್ಕೆ ಸಮಯ ಕೊಡಲು ಆಗುತ್ತಿಲ್ಲ. ನಾನು ಈ ವೃತ್ತಿಗೆ ಸೇರಿದ ನಂತರ ಒಂದೇ ಒಂದು ಮದುವೆ ಅಟೆಂಡ್ ಮಾಡಿದ್ದೇನೆ. ನಾನು ಇಲ್ಲಿ ಇರುವುದ್ದಕ್ಕೆ ಕೆಲವು ಪ್ರಮುಖರು ಕಾರಣರಾಗಿದ್ದರು. ಆದರೆ ಕೊನೆ ಪಕ್ಷ ಅವರ ಅಂತ್ಯಕ್ರಿಯೆಗೂ ಹೋಗುವುದಕ್ಕೆ ನನಗೆ ಆಗಲಿಲ್ಲ. ತಂದೆ ತಾಯಿ, ಬಂಧು ಬಳಗ ಎಲ್ಲಾ ಊರಲ್ಲಿ ಇದ್ದಾರೆ. ನಾನು ಇಲ್ಲಿದ್ದು ಏನು ಮಾಡಲಿ ಎಂದು ಹೇಳಿದ್ದರು. ಇದನ್ನೂ ಓದಿ: ರವಿ ಚೆನ್ನಣ್ಣನವರ್ ಮಾತಿಗೆ ಅಣ್ಣಾಮಲೈ ಫುಲ್ ಖುಷ್

ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕೆಂದು ಪ್ಲಾನ್ ಮಾಡಿದ್ದೆ. ಚುನಾವಣೆ ಮುಗಿಸದೇ ಹೋದರೆ ಸರಿ ಹೋಗಲ್ಲ ಎಂದು ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ. ಮಲೇಷ್ಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್‍ಸಿ ಪರೀಕ್ಷೆ ಬರೆದಿದ್ದೆ. ನನಗೆ ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಕೆಲಸ ಮಾಡಲಿ. ಸದ್ಯ ನಾನು ಯಾವ ರಾಜಕೀಯಕ್ಕೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮುಂದಿನ ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜೀನಾಮೆ ಬಳಿಕ ಹಿಮಾಲಯ ಟ್ರೆಕ್ಕಿಂಗ್ ಹೋಗುತ್ತೇನೆ. ಅಲ್ಲದೇ ನನ್ನ ಕುಟುಂಬಕ್ಕೆ ಟೈಂ ಸಹ ಕೋಡುತ್ತೇನೆ. ನನ್ನ ಮಗ ಓದುತ್ತಿದ್ದಾನೆ. ಅವನ ಜೊತೆ ಇರುತ್ತೇನೆ. 33-34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ಆದರೆ ನಾನು ತೆಗೆದುಕೊಂಡಿದ್ದೇನೆ. ಏಕೆಂದರೆ ನನಗೆ ಬೇರೆ ಜೀವನ ಇದೆ ಎಂದು ಅಣ್ಣಾಮಲೈ ತಿಳಿಸಿದ್ದರು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೊಂದು ಗ್ರಂಥಾಲಯ, ಇಷ್ಟವಾದ್ರೆ ಪುಸ್ತಕ ನೀಡಿ: ಅಣ್ಣಾಮಲೈ 

ಅಣ್ಣಾಮಲೈ ರಾಜೀನಾಮೆ ವಿಚಾರ ತಿಳಿದು ಅಭಿಮಾನಿಗಳು ಅವರ ಮನೆ ಮುಂದೆ ಬಂದಿದ್ದರು. ”ಸರ್, ಮಾಧ್ಯಮದಲ್ಲಿ ನಿಮ್ಮ ರಾಜೀನಾಮೆ ವಿಚಾರ ತಿಳಿದು ಬೇಜಾರಾಯಿತು. ನೀವು ಇರಬೇಕು ಸಾರ್” ಎಂದ ಅಭಿಮಾನಿಗಳು ಅಣ್ಣಾಮಲೈ ಬಳಿ ಕೇಳಿಕೊಂಡಿದ್ದರು. ಇದೇ ವೇಳೆ ಅಭಿಮಾನಿಗಳ ಸೆಲ್ಫಿಗೆ ಅಣ್ಣಾಮಲೈ ತಾವೇ ಮೊಬೈಲ್ ಹಿಡಿದು ಫೋಟೋ ತೆಗೆದುಕೊಟ್ಟಿದ್ದರು.

ಇದಾದ ಬಳಿಕ ಅಣ್ಣಾಮೈಲೆ ಅವರು ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನನ್ನ ರಾಜೀನಾಮೆ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಇಂದು ಅಂದರೆ ಮೇ 28ರಂದು ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳಲೂ ಸ್ವಲ್ಪ ಸಮಯ ಬೇಕಾಗುತ್ತದೆ. ನನ್ನ ಸುತ್ತ ಹರಿದಾಡುವ ಮಾತುಗಳ ಬಗ್ಗೆ ನಾನು ಸ್ಪಷ್ಟನೆ ನೀಡುತ್ತೇನೆ. ನಾನು 6 ತಿಂಗಳಿನಿಂದ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ ಎಂದು ತಿಳಿಸಿದ್ದರು.

ನಾನು ನನ್ನ ಸಹದ್ಯೋಗಿಗಳ ಜೊತೆ ಕಳೆದ ಸುಂದರವಾದ ಕ್ಷಣಗಳು ಖಾಕಿ ನನಗೆ ಎಂದಿಗೂ ಮರೆಯಲು ಬಿಡುವುದಿಲ್ಲ. ಪೊಲೀಸ್ ಅಧಿಕಾರಿಯ ಕೆಲಸ ದೇವರಿಗೆ ಹತ್ತಿರವಾದ ಕೆಲಸ ಎಂದು ನಾನು ನಂಬಿದ್ದೇನೆ. ಹೆಚ್ಚು ಒತ್ತಡ ಇರುವ ಕೆಲಸಗಳು ತನ್ನದೇ ಆದ ಕಡಿಮೆ ಸಮಯದಲ್ಲಿ ಬರುತ್ತದೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನಾನು ಕಷ್ಟದಲ್ಲಿದ್ದಾಗ ನನಗೆ ಜನರು ಸಹಾಯ ಮಾಡಿದ್ದರು. ಆದರೆ ಅವರಿಗೆ ಕಷ್ಟದ ಸಮಯ ಬಂದಾಗ ನನಗೆ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.

Click to comment

Leave a Reply

Your email address will not be published. Required fields are marked *