ನವದೆಹಲಿ: ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಯಲ್ಲಿ (NEET, NET Row) ಅಕ್ರಮ ಶಂಕೆ ವ್ಯಕ್ತವಾದ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಬೆಳವಣಿಗೆಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ-2024 ಕಾನೂನು ಜಾರಿಗೆ ಅಧಿಸೂಚನೆ ಹೊರಡಿಸಿದೆ. ಈ ಮಸೂದೆಯನ್ನು ಕಳೆದ ಫೆಬ್ರವರಿಯಲ್ಲಿ ಸಂಸತ್ ಅಂಗೀಕರಿಸಿತ್ತು, ಜೂ.21 ರಿಂದ ಈ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: CSIR-UGC-NET ಪರೀಕ್ಷೆ ಮಂದೂಡಿಕೆ
Advertisement
ಹೊಸ ಕಾನೂನು ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ತಡೆಯಲು ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ. ಸಂಘಟಿತವಾಗಿ ನಿರಂತರವಾಗಿ ಅಪರಾಧಗಳಲ್ಲಿ ತೊಡಗಿರುವವರಿಗೆ ಐದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲಿದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು, ಪರೀಕ್ಷಾ ಪ್ರಾಧಿಕಾರ, ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ಸಂಸ್ಥೆ ಸೇರಿದಂತೆ ಪರೀಕ್ಷಾ ಅಕ್ರಮ ಅಪರಾಧವನ್ನು ಮಾಡಿದರೆ ಅವರಿಗೆ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. 1 ಕೋಟಿಗಿಂತ ಕಡಿಮೆಯಿಲ್ಲದ ದಂಡ ವಿಧಿಸಲಾಗುತ್ತದೆ ಎಂದು ಕಾನೂನು ಹೇಳುತ್ತದೆ.
Advertisement
Advertisement
ಸಂಘಟಿತ ಪೇಪರ್ ಸೋರಿಕೆ ಅಪರಾಧದಲ್ಲಿ ಪರೀಕ್ಷಾ ಕೇಂದ್ರಗಳು ಭಾಗಿಯಾಗಿರುವುದು ಸಾಬೀತಾದರೆ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿದೆ. ಅಲ್ಲದೇ ಹೊಸ ಪರೀಕ್ಷೆಯ ಪ್ರಮಾಣಾನುಗುಣವಾದ ವೆಚ್ಚವನ್ನು ಸಹ ಅದರಿಂದ ವಸೂಲಿ ಮಾಡಲಾಗುತ್ತದೆ. ಪ್ರಶ್ನೆ ಪತ್ರಿಕೆಗಳು ಅಥವಾ ಉತ್ತರ ಕೀಗಳನ್ನು ಸೋರಿಕೆ ಮಾಡುವುದು, ಅನಧಿಕೃತ ಸಂವಹನದ ಮೂಲಕ ಅಭ್ಯರ್ಥಿಗಳಿಗೆ ಸಹಾಯ ಮಾಡುವುದು, ಕಂಪ್ಯೂಟರ್ ನೆಟ್‌ವರ್ಕ್‌ಗಳ ದುರ್ಬಳಕೆ, ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು, ಅರ್ಹತೆಗಾಗಿ ದಾಖಲೆಗಳನ್ನು ತಿದ್ದುವುದನ್ನು ಅಕ್ರಮದ ವ್ಯಾಪ್ತಿಯಲ್ಲಿ ಸೇರಿಸಿದೆ. ಇದನ್ನೂ ಓದಿ: ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಕ್ರಮ ಆರೋಪ – ಸಿಬಿಐನಿಂದ ಎಫ್‍ಐಆರ್
Advertisement
ಕಾನೂನಿನಡಿ ಬರುವ ಅಪರಾಧಗಳು ಜಾಮೀನು ರಹಿತವಾಗಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯಿಂದ ಅಪರಾಧವನ್ನು ತನಿಖೆ ನಡೆಸಲಾಗುವುದು. ಹೆಚ್ಚುವರಿಯಾಗಿ, ಯಾವುದೇ ತನಿಖೆಯನ್ನು ಕೇಂದ್ರ ಏಜೆನ್ಸಿಗಳಿಗೆ ವರ್ಗಾಯಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC), ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುವ ಎಲ್ಲಾ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಈ ಕಾನೂನು ವ್ಯಾಪ್ತಿಯಲ್ಲಿ ಒಳಗೊಂಡಿದೆ.