ನವದೆಹಲಿ: ಕೇಂದ್ರ ಬಜೆಟ್-2025 (Union Budget 2024) ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ 8ನೇ ಬಾರಿ ಬಜೆಟ್ ಮಂಡನೆ ಮಾಡಿರುವ ಹಣಕಾಸು ಸಚಿವೆ ಸೀತರಾಮನ್ ಫೆ.1 ಭಾನುವಾರ 9ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮಂಗಳವಾರ (ಜ.27) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹಲ್ವಾ ಕಾರ್ಯಕ್ರಮ (Halwa Ceremony) ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಇತರ ಹಿರಿಯ ಅಧಿಕಾರಿಗಳು ಇದ್ದರು. ಹಣಕಾಸು ಸಚಿವರು ಬಜೆಟ್ ಮುದ್ರಣಾಲಯಕ್ಕೆ ಪ್ರವಾಸ ಕೈಗೊಂಡು ಸಿದ್ಧತೆಗಳನ್ನು ಪರಿಶೀಲಿಸಿದರು ಮತ್ತು ಇಡೀ ಬಜೆಟ್ ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ
ಬಜೆಟ್ ಮಂಡನೆಗೂ ಮುನ್ನ ಹಲ್ವಾ ಹಂಚುವುದು ಏಕೆ? ಏನಿದು ಹಲ್ವಾ ಕಾರ್ಯಕ್ರಮ? ಯಾರಿಗೆ ಹಲ್ವಾ ಹಂಚುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಸಿಹಿ ತಿಂಡಿಗಳನ್ನು ತಯಾರಿಸಿ ಹಂಚುವುದು ಅನೇಕ ಭಾರತೀಯ ಸಮಾರಂಭಗಳು ಮತ್ತು ಹಬ್ಬಗಳ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಬಜೆಟ್ ಮಂಡನೆ ಕಾರ್ಯದಲ್ಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂಬುದು ಹಲವರ ಭಾವನೆ. ಅದರ ಹೊರತಾಗಿ ಇನ್ನೊಂದು ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ. ಬಜೆಟ್ ಗೌಪ್ಯತೆ ಕಾಪಾಡುವುದೇ ಆ ಉದ್ದೇಶ. ಇದನ್ನೂ ಓದಿ: 1 ಒಪ್ಪಂದ, 27 ಯುರೋಪ್ ಮಾರುಕಟ್ಟೆಗಳು – ಕರ್ನಾಟಕಕ್ಕೆ ಏನು ಪ್ರಯೋಜನ?
ಬಜೆಟ್ ಅಧಿವೇಶನಕ್ಕೆ 4-5 ದಿನಗಳ ಮೊದಲು ಹಣಕಾಸು ಇಲಾಖೆ ‘ಹಲ್ವಾ’ ಸಮಾರಂಭ ಆಯೋಜಿಸುತ್ತದೆ. ದೊಡ್ಡ ಬಾಣಲೆಯಲ್ಲಿ ತಯಾರಿಸಿದ ಹಲ್ವಾವನ್ನು ಕೇಂದ್ರ ಸಚಿವರು ಹಂಚುತ್ತಾರೆ.
ಹಂಚುವುದು ಏಕೆ?
ಈ ಕಾರ್ಯದ ಹಿಂದಿನ ಚಾರಿತ್ರಿಕ ಹಿನ್ನೆಲೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಯಾವುದೇ ಶುಭ ಕಾರ್ಯ ಆರಂಭಿಸುವುದಕ್ಕೂ ಮೊದಲು ಸಿಹಿ ಹಂಚುವುದು ಸಂಪ್ರದಾಯ. ಅದರಂತೆ ಇಲ್ಲೂ ಕೂಡ ಬಜೆಟ್ ಮಂಡನೆಗೂ ಮೊದಲು ಹಲ್ವಾ ಸೆರೆಮನಿ ನಡೆಯುತ್ತದೆ. ಹಣಕಾಸು ಇಲಾಖೆಯ ಸಿಬ್ಬಂದಿಯನ್ನು ಬಜೆಟ್ ಪ್ರತಿ ಮುದ್ರಣ ಕಾರ್ಯದಲ್ಲಿ ತೊಡಗಿಸಲು ನೀಡುವ ಚಾಲನೆಯೇ ‘ಹಲ್ವಾ’ ಸೆರೆಮನಿ ಎಂದರ್ಥ.
ಯಾರಿಗೆ ಹಂಚುತ್ತಾರೆ ಹಲ್ವಾ?
ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಲಾಗುತ್ತದೆ. ಈ ಸಮಾರಂಭ ಆದ ಬೆನ್ನಲ್ಲೇ ಅವರು ಬಜೆಟ್ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಬಜೆಟ್ ಗೌಪ್ಯತೆ ಕಾಪಾಡಲು ಹಲ್ವಾ ಸಮಾರಂಭ?
ಹೌದು, ಬಜೆಟ್‌ಗೆ ಸಂಬಂಧಿಸಿದ ಮಾಹಿತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗುತ್ತದೆ. ಕಾರ್ಯಕ್ರಮ ಮುಗಿದ ಕೂಡಲೇ ಹಣಕಾಸು ಇಲಾಖೆ ಸಿಬ್ಬಂದಿ ಒಂದು ಕಡೆ ಬಂಧಿಯಾಗುತ್ತಾರೆ. ಬಜೆಟ್ ಮಂಡಿಸುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಯಾರನ್ನೂ ಸಂಪರ್ಕಿಸುವಂತಿಲ್ಲ. ಬಾಹ್ಯ ಜಗತ್ತಿನ ಸಂಪರ್ಕವೇ ಅವರಿಗೆ ಇಲ್ಲದಂತೆ ಮಾಡಲಾಗುತ್ತದೆ. ಫೋನ್, ಇ-ಮೇಲ್ ಯಾವುದನ್ನೂ ಬಳಸಲು ಅವಕಾಶ ಇರುವುದಿಲ್ಲ. ಮನೆಯವರನ್ನಾಗಲಿ ಅಥವಾ ನೆರೆಹೊರೆಯವರನ್ನಾಗಲಿ ಸಂಪರ್ಕಿಸುವ ಹಾಗಿಲ್ಲ. ಮುದ್ರಣ ಕಾರ್ಯಕ್ಕಾಗಿ ಅವರೆಲ್ಲರೂ ಉತ್ತರ ಬ್ಲಾಕ್‌ನ ತಳ ಅಂತಸ್ಥಿನ ಕಚೇರಿಗೆ ಸ್ಥಳಾಂತರಗೊಳ್ಳುತ್ತಾರೆ.
ಗೌಪ್ಯತೆ ಯಾಕೆ?
1950 ರ ವರೆಗೆ ಬಜೆಟ್ ಪ್ರತಿಗಳು ರಾಷ್ಟ್ರಪತಿ ಭವನದಲ್ಲೇ ಮುದ್ರಣಗೊಳ್ಳುತ್ತಿದ್ದವು. ಆದರೆ ಪ್ರತಿಗಳು ಮತ್ತು ಮಾಹಿತಿ ಸೋರಿಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್‌ಗೆ ಮುದ್ರಣ ಕಾರ್ಯ ಸ್ಥಳಾಂತರಗೊಂಡಿತು. ಆಗಿನಿಂದಲೂ ಅಲ್ಲಿಯೇ ಮುದ್ರಣ ನಡೆಯುತ್ತಿದೆ.
ಹಣಕಾಸು ಸಚಿವರ ತಲೆದಂಡ!
1950 ರಲ್ಲಿ ಬಜೆಟ್ ಸೋರಿಕೆಯಾಗಿತ್ತು. ಪರಿಣಾಮವಾಗಿ ಆಗಿನ ಹಣಕಾಸು ಸಚಿವರಾಗಿದ್ದ ಜಾನ್ ಮಥಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಆಗಿನಿಂದ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗಿದೆ.
ಬಜೆಟ್ ಪ್ರತಿ ಎಲ್ಲಿ ಮುದ್ರಣವಾಗುತ್ತೆ?
1950 ಕ್ಕಿಂತ ಮೊದಲು ರಾಷ್ಟ್ರಪತಿ ಭವನದ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. ಭದ್ರತಾ ಸೋರಿಕೆಯ ನಂತರ 1950 ರಿಂದ 1980 ವರೆಗೆ ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಸರ್ಕಾರಿ ಮುದ್ರಣಾಲಯಕ್ಕೆ ಸ್ಥಳಾಂತರಿಸಲಾಯಿತು. 1980 ರಿಂದ ಉತ್ತರ ಬ್ಲಾಕ್‌ನಲ್ಲಿರುವ ಹೆಚ್ಚು ಸುರಕ್ಷಿತ ನೆಲಮಾಳಿಗೆಯ ಸೌಲಭ್ಯಕ್ಕೆ ಸ್ಥಳಾಂತರ ಮಾಡಲಾಗಿದೆ. 2021 ರಲ್ಲಿ ಬಜೆಟ್ ಕಾಗದರಹಿತ (ಡಿಜಿಟಲ್) ಸ್ವರೂಪಕ್ಕೆ ಪರಿವರ್ತನೆಗೊಂಡಿದ್ದರೂ, ಅಧಿಕೃತ ಬಳಕೆ ಮತ್ತು ದಾಖಲೆಗಳಿಗಾಗಿ ನೂರಾರು ಪ್ರತಿಗಳನ್ನು ಇನ್ನೂ ನಾರ್ತ್ ಬ್ಲಾಕ್ ಪ್ರೆಸ್‌ನಲ್ಲಿ ಮುದ್ರಿಸಲಾಗುತ್ತದೆ.
ಬಜೆಟ್ ತಯಾರಿಕೆ, ಮುದ್ರಣ ಸೇರಿದಂತೆ ಸರಿಸುಮಾರು 60–70 ಅಧಿಕಾರಿಗಳು ಮತ್ತು ಕಾರ್ಮಿಕರನ್ನು ನೆಲಮಾಳಿಗೆಯ ಮುದ್ರಣಾಲಯ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಫೆಬ್ರವರಿ 1 ರಂದು ಹಣಕಾಸು ಸಚಿವರು ಬಜೆಟ್ ಭಾಷಣ ಮುಗಿಯುವರೆಗೂ ಅವರನ್ನು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತ ಮಾಡಲಾಗುತ್ತದೆ.

