ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶುಕ್ರವಾರ ತಮ್ಮ ಸತತ 8ನೇ ಬಜೆಟ್ (Budget) ಮಂಡಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಸಂಸತ್ ಇತಿಹಾಸದಲ್ಲಿ ಹೆಚ್ಚು ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಮಂತ್ರಿ (Finance Minister) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಫೆ.1 ರಂದು ಸೀತಾರಾಮನ್ ಅವರು 8ನೇ ಬಜೆಟ್ ಮಂಡಿಸಲಿದ್ದಾರೆ. ಇದು ಭಾರತದ ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆಯಾಗಲಿದೆ.
Advertisement
Advertisement
ಮೊರಾರ್ಜಿ ದೇಸಾಯಿ – 10 ಬಜೆಟ್
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ (Morarji Desai) ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ನಂತರ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಈ ಅವಧಿಯಲ್ಲಿ ಒಟ್ಟು 10 ಬಜೆಟ್ ಮಂಡಿಸಿದ್ದಾರೆ. 1959ರ ಫೆಬ್ರವರಿ 28 ರಂದು ತಮ್ಮ ಮೊದಲ ಬಜೆಟ್ ಮಂಡಿಸಿದರು. 1962 ರಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ಮೊದಲು ಎರಡು ವರ್ಷಗಳಲ್ಲಿ ಪೂರ್ಣ ಬಜೆಟ್ ಮಂಡಿಸಿದ್ದರು. ಇದರ ನಂತರ ಎರಡು ಪೂರ್ಣ ಬಜೆಟ್‌ಗಳು ಮಂಡನೆಯಾದವು. ನಾಲ್ಕು ವರ್ಷಗಳ ನಂತರ, ಅವರು 1967 ರಲ್ಲಿ ಮತ್ತೊಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. ನಂತರ 1967, 1968 ಮತ್ತು 1969 ರಲ್ಲಿ ಮೂರು ಪೂರ್ಣ ಬಜೆಟ್‌ಗಳನ್ನು ಮಂಡಿಸಿದರು. ಈ ಮೂಲಕ ಒಟ್ಟು 10 ಬಜೆಟ್‌ಗಳನ್ನು ಮಂಡಿಸಿದ್ದಾರೆ.
Advertisement
Advertisement
ಚಿದಂಬರಂ – 9 ಬಜೆಟ್
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ (P. Chidambaram) ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಮೊದಲ ಬಾರಿಗೆ 1996ರ ಮಾರ್ಚ್ 19 ರಂದು ಪ್ರಧಾನಿ ಹೆಚ್.ಡಿ. ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡಿಸಿದರು. ಮುಂದಿನ ವರ್ಷ ಅದೇ ಸರ್ಕಾರದ ಅಡಿಯಲ್ಲಿ ಅವರು ಮತ್ತೊಂದು ಬಜೆಟ್ ಮಂಡಿಸಿದರು. 2014 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಾಗ ಬಜೆಟ್ ಮಂಡನೆ ಮಾಡಿದರು. 2004 ಮತ್ತು 2008 ರ ನಡುವೆ ಅವರು ಐದು ಬಜೆಟ್ ಮಂಡಿಸಿದರು. ಕೇಂದ್ರ ಗೃಹ ಸಚಿವರಾಗಿ ಅಲ್ಪ ಅವಧಿ ಸೇವೆ ಸಲ್ಲಿಸಿದರು. ಮತ್ತೆ ಹಣಕಾಸು ಸಚಿವಾಲಯಕ್ಕೆ ಮರಳಿ, 2013 ಮತ್ತು 2014 ರಲ್ಲಿ ಬಜೆಟ್ ಮಂಡಿಸಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪೈಕಿ ಚಿದಂಬರಂ 2ನೇ ಸ್ಥಾನದಲ್ಲಿದ್ದಾರೆ.
ಪ್ರಣಬ್ ಮುಖರ್ಜಿ – 8 ಬಜೆಟ್
ಪ್ರಣಬ್ ಮುಖರ್ಜಿ (Pranab Mukherjee) ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಎಂಟು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅವರು 1982, 1983 ಮತ್ತು 1984 ರಲ್ಲಿ ಆಯವ್ಯಯ ಮಂಡಿಸಿದ್ದರು. 2009 ರಿಂದ 2012ರ ನಡುವೆ ಯುಪಿಎ ಸರ್ಕಾರದ ಅವಧಿಯಲ್ಲಿ ಸತತ ಐದು ಬಜೆಟ್‌ಗಳನ್ನು ಮಂಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ – 8 ಬಜೆಟ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಇದುವರೆಗೆ 7 ಬಜೆಟ್ ಮಂಡಿಸಿದ್ದಾರೆ. ಇಂದು 8ನೇ ಬಜೆಟ್ ಮಂಡಿಸಿ ದಾಖಲೆ ಬರೆಯಲಿದ್ದಾರೆ. 2019, 2020, 2021, 2022, 2023, 2024 (ಮಧ್ಯಂತರ ಬಜೆಟ್), 2024 (ಪೂರ್ಣ ಬಜೆಟ್) ಅವಧಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಇದನ್ನೂ ಓದಿ: Economic Survey 2025| ಜಿಡಿಪಿ 6.3-6.8% ನಿರೀಕ್ಷೆ – ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ? ಯಾವ ವಲಯದ ಸಾಧನೆ ಎಷ್ಟಿದೆ?
ಯಶವಂತ್ ಸಿನ್ಹಾ – 7 ಬಜೆಟ್
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಯಶವಂತ್ ಸಿನ್ಹಾ (Yashwant Sinha) ಅವರು 7 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಭಾರತದ ಆರ್ಥಿಕತೆಯನ್ನು ಉದಾರೀಕರಣಗೊಳಿಸುವ ಗುರಿಯನ್ನು ಹೊಂದಿರುವ ಸುಧಾರಣೆಗಳನ್ನು ಪರಿಚಯಿಸಿದ್ದಕ್ಕಾಗಿ ಅವರ ಅಧಿಕಾರಾವಧಿಯನ್ನು ಸ್ಮರಿಸಲಾಗುತ್ತದೆ.
ದೇಶ್ಮುಖ್ – 7 ಬಜೆಟ್
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಮೊದಲ ಭಾರತೀಯ ಗವರ್ನರ್ ಸಿ.ಡಿ. ದೇಶ್ಮುಖ್ (CD Deshmukh) ಕೂಡ 7 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಮೊದಲ, ಎರಡನೇ ಪಂಚವಾರ್ಷಿಕ ಯೋಜನೆಗಳ ಸೂತ್ರೀಕರಣ ಮತ್ತು ಅನುಷ್ಠಾನದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
ಮನಮೋಹನ್ ಸಿಂಗ್ – 5 ಬಜೆಟ್
1991 ರಿಂದ 1995 ರವರೆಗೆ ಪಿ ವಿ ನರಸಿಂಹ ರಾವ್ (PV Narasimha Rao) ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸತತ ಐದು ಬಜೆಟ್‌ಗಳನ್ನು ಮಂಡಿಸಿದ್ದರು.