ಬೆಂಗಳೂರು: ಸಾಮಾನ್ಯ ಜನರ ಪಾಲಿಗೆ ಭರವಸೆ ಆಶಾಕಿರಣವಾಗಬೇಕಿದ್ದ ಕೇಂದ್ರ ಬಜೆಟ್‍ನಲ್ಲಿ ಅಂಥ ಯಾವುದೇ ಅಂಶ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಾಮಾನ್ಯದ ಬದುಕಿನ ಬಗ್ಗೆ ಬಜೆಟ್ ಯೋಚನೆಯನ್ನೇ ಮಾಡಿಲ್ಲ. ಕೋವಿಡ್, ಬೆಲೆ ಏರಿಕೆಯಿಂದ ಬಸವಳಿದ ಬಡಜನರ ಬಗ್ಗೆ ಕನಿಕರ ತೋರಿಲ್ಲ. ಕೋವಿಡ್ ಸಂಕಷ್ಟದ ನಂತರ ದೇಶದಲ್ಲಿ ಬಡತನಕ್ಕೆ ಹೆಚ್ಚು ಜನರು ದೂಡಲ್ಪಡುತ್ತಿದ್ದರೆ, ಸಿರಿವಂತರು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟ ಪರಿಹಾರವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ
ಸೋಂಕಿನ ಮಾರಿಗೆ ಸಿಲುಕಿ ಭರವಸೆ ಕಳೆದುಕೊಂಡಿರುವ ರೈತಾಪಿ, ಕಾರ್ಮಿಕರಿಗೆ ಧೈರ್ಯ ತುಂಬುವ ಅಥವಾ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಅಂಶಗಳು ಈ ಬಜೆಟ್ ನಲ್ಲಿ ಇರಲೇಬೇಕಾಗಿತ್ತು. ಆದರೆ ಈ ಬಜೆಟ್, ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಎಂದು ಕಿಡಿಕಾರಿದರು.
ಬಜೆಟ್ ಬಗ್ಗೆ ದೊಡ್ಡಮಟ್ಟಿಗೆ ಹೇಳುವಂತಹದ್ದು ಏನೂ ಇಲ್ಲ. ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಿ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಬಜೆಟ್ ಬಗ್ಗೆ ಸಂಪೂರ್ಣವಾಗಿ ಗಮನಿಸಿಲ್ಲ. ನದಿ ಯೋಜನೆ ಬಗ್ಗೆ ಮೂರು ವರ್ಷದಿಂದ ಹೇಳುತ್ತಿದ್ದಾರೆ. ಕಾವೇರಿ-ಪೆನ್ನಾರ್, ಕೃಷ್ಣ-ಗೋದಾವರಿ ನದಿಗಳ ಜೋಡಣೆ ಬಗ್ಗೆ ಹೇಳಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕಲ್ಲ ಎಂದರು. ಇದನ್ನೂ ಓದಿ: ಸಿಮೆಂಟ್, ಕಬ್ಬಿಣದ ಬೆಲೆ ಕಡಿಮೆಯಾಗಿಲ್ಲ ಮನೆ ಕಟ್ಟೋದು ಹೇಗೆ: ಡಿಕೆಶಿ
ನದಿ ಜೋಡಣೆ ವಿಚಾರ ಬರಿ ಚರ್ಚೆಯಲ್ಲಿ ಇದೆ. ಅದು ಕಾರ್ಯರೂಪಕ್ಕೆ ಬರಬೇಕು. ಹೆಚ್ಚಿನ ತೆರಿಗೆ ವಿಧಿಸಿಲ್ಲ ಅನ್ನುವುದು ಬಿಟ್ಟರೆ ಬೇರೆ ಏನೂ ಇಲ್ಲ. ಯಾವುದೇ ಹೊಸ ರೀತಿಯ ಅಭಿವೃದ್ದಿ ಕಾರ್ಯಕ್ರಮವಿಲ್ಲ. ಈ ವರ್ಷವನ್ನು ಕಳೆಯುವ ಬಜೆಟ್ ಅಷ್ಟೇ ಇದು ಎಂದು ಟೀಕಿಸಿದರು.