ಈ ಬಜೆಟ್ ಜಸ್ಟ್ ಟ್ರೇಲರ್ ಮತ್ತೆ ಆಡಳಿತಕ್ಕೆ ಬಂದ್ರೆ ಇನ್ನಷ್ಟು ಅಭಿವೃದ್ಧಿ: ಪ್ರಧಾನಿ ಮೋದಿ

Public TV
2 Min Read
narendra modi

ನವದೆಹಲಿ: ಇದು ಕೇವಲ ಮಧ್ಯಂತರ ಬಜೆಟ್ ಹಾಗೂ ಟ್ರೇಲರ್ ಇದ್ದಂತೆ. ಚುನಾವಣೆ ಬಳಿಕ ನಾವು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಮಾತನಾಡಿದ ನರೇಂದ್ರ ಮೋದಿ ಅವರು, ಬಜೆಟ್ ಮಂಡಿಸಲು ತೆರಿಗೆ ಪಾವತಿಸಿದ 12 ಕೋಟಿ ರೈತರು, ಅವರ ಕುಟುಂಬಸ್ಥರಿಗೆ, 3 ಕೋಟಿ ರೂ. ವಾರ್ಷಿಕ ವೇತನ ಹೊಂದಿರುವ ಜನರಿಗೆ ಮತ್ತು 40 ಕೋಟಿ ಶ್ರಮಿಕರಿಗೆ ನೇರವಾಗಿ ಸರ್ಕಾರದ ಯೋಜನೆಗಳು ಮುಟ್ಟಲಿವೆ. ಉಜ್ವಲ ಯೋಜನೆ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. 6 ಕೋಟಿಗೂ ಅಧಿಕ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಸಿಕ್ಕಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 1.5 ಕೋಟಿ ಜನರಿಗೆ ಮನೆಗಳು ಸಿಗಲಿವೆ ಎಂದು ತಿಳಿಸಿದರು.

ಸರ್ಕಾರದ ಶ್ರಮದಿಂದ ದಾಖಲೆಯ ಮಟ್ಟದಲ್ಲಿ ಬಡತನ ಕಡಿಮೆಯಾಗುತ್ತಿದೆ. ಕೋಟ್ಯಂತರ ಜನರು ಬಡತನದಿಂದ ಹೊರಬಂದು, ಮಧ್ಯಮ ವರ್ಗವನ್ನು ತಲುಪುತ್ತಿದ್ದಾರೆ. ಅವರ ಕನಸುಗಳನ್ನು ಈಡೇರಿಸಿಕೊಳ್ಳುವ ಮೂಲಕ ದೇಶದ ವಿಕಾಸಕ್ಕೆ ಶ್ರಮಿಸುತ್ತಿದ್ದಾರೆ. ಸರ್ಕಾರವು ಬಡ ಜನರಿಗೆ ಭದ್ರತೆ ಹಾಗೂ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಮಧ್ಯಮ ವರ್ಗ ಹಾಗೂ ಉನ್ನತ ಮಧ್ಯಮ ವರ್ಗದಿಂದ ಕಾನೂನು ಬದ್ಧವಾಗಿ ದೇಶಕ್ಕೆ ತೆರಿಗೆ ಪಾವತಿಯಾಗುತ್ತಿದೆ. ಇದರಿಂದ ಯೋಜನೆಗಳು ಸಾಕಾರಗೊಳ್ಳುತ್ತಿವೆ. ಬಡವರ ಕಲ್ಯಾಣವಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ಸರ್ಕಾರ ಆದಾಯ ಮಿತಿಯನ್ನು ಏರಿಕೆ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರವು ಆದಾಯ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿದೆ ಎಂದರು.

ವಿವಿಧ ಸರ್ಕಾರಗಳು ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ಆದರೆ ಅವುಗಳು ಕೇವಲ 2 ರಿಂದ 3 ಕೋಟಿ ರೈತರಿಗೆ ಮಾತ್ರ ಸಿಗುತ್ತಿದ್ದವು. ಆದರೆ ಈಗ ಜಾರಿಯಾಗಲಿರುವ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿಯು ಐದು ಎಕರೆ ಕಡಿಮೆ ಜಮೀನು ಹೊಂದಿರುವ 12 ಕೋಟಿಗೂ ಅಧಿಕ ರೈತರಿಗೆ ಸಿಗಲಿದೆ. ಸ್ವಾತಂತ್ರ್ಯ ನಂತರ ರೈತರಿಗಾಗಿ ರೂಪಿಸಿದ ಮಹತ್ವದ ಯೋಜನೆ ಇದಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರವು ರೈತರಿಗೆ ಹಂತ ಹಂತವಾಗಿ ಯೋಜನೆಗಳನ್ನು ಕೊಡುತ್ತಾ ಬಂದಿದೆ. ಪಶುಪಾಲನೆ, ಗೋ ರಕ್ಷಣೆ, ಮೀನುಗಾರಿಕೆ ಸೇರಿದಂತೆ ಕೃಷಿಗೆ ಪೂರಕ ಯೋಜನೆಗಳನ್ನು ನಾವು ನೀಡಿದ್ದೇವೆ. ಮೀನುಗಾಗರರು ಹಾಗೂ ರೈತರನ್ನು ಬಲಗೊಳಿಸಲು ಶ್ರಮಿಸುತ್ತಿದ್ದೇವೆ ಎಂದರು.

ದೇಶ ಅನೇಕ ಕ್ಷೇತ್ರದಲ್ಲಿ ಇಂದು ಅಭಿವೃದ್ಧಿಯಾಗುತ್ತದೆ. ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ನಿರಂತರವಾಗಿ ಬಡ್ತಿ ಪಡೆಯುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಮಾನ್ ಧನ್ ಯೋಜನಾ ರೂಪಿಸಲಾಗಿದೆ. ಅಯುಷ್ಮಾನ್ ಭಾರತ್ ಯೋಜನೆ, ಪ್ರಧಾನಿ ಮಂತ್ರಿ ಭಿಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಂದ ಜನರಿಗೆ ಲಾಭ ಸಿಗುತ್ತಿದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *