ಅಹಮದಾಬಾದ್: ಅಪರೂಪದಲ್ಲಿ ಅಪರೂಪವೆಂಬಂತೆ 20 ದಿನಗಳ ಪುಟ್ಟ ಗಂಡುಮಗುವಿನ ಹೊಟ್ಟೆಯಿಂದ ಭ್ರೂಣ ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಅಹಮದಾಬಾದ್ ನ ಸನಂದ ಪಟ್ಟಣದಲ್ಲಿ ನಡೆದಿದೆ.
20 ದಿನದ ಗಂಡು ಶಿಶುವಿನ ಹೊಟ್ಟೆಯಿಂದ 750 ಗ್ರಾಂ ತೂಕದ ಬೆಳವಣಿಗೆಯಾಗದ ಭ್ರೂಣವನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಈಗ ಮಗು ಡಿಸ್ಚಾರ್ಜ್ ಆಗಿದೆ. ಮಗು ಬೇಗ ಚೇತರಿಸಿಕೊಳ್ಳುವುದಾಗಿ ವೈದ್ಯರು ತಿಳಿಸಿದ್ದಾರೆ.
10 ದಿನಗಳ ಹಿಂದೆ ಈ ಮಗುವನ್ನು ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದರು. ವೈದ್ಯರು ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ರೆಟ್ರೋಪೆರಿಟೋನಿಯಲ್ ಮೆಚ್ಯೂರ್ ಟೆರಾಟೋಮಾ ಅಥವಾ ಭ್ರೂಣದೊಳಗೆ ಭ್ರೂಣ ಇರುವುದು ಬೆಳಕಿಗೆ ಬಂದಿತ್ತು. ಇದೊಂದು ಅಪರೂಪದ ಪ್ರಕರಣವಾಗಿದ್ದು ಐದು ಲಕ್ಷದಲ್ಲಿ ಒಂದು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಬದುಕುವುದು ತೀರಾ ವಿರಳವೆಂದು ಪೋಷಕರಿಗೆ ತಿಳಿಸಿ ನಂತರ ಮಗುವಿಗೆ ಚಿಕಿತ್ಸೆ ಮಾಡಲು ನಿರ್ಧರಿಸಿದೆವು ಎಂದು ಡಾ.ಭಾವಿನ್ ವಾಸಾವಡಾ ಅವರು ಹೇಳಿದ್ದಾರೆ.
ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ತೆಗೆದುಹಾಕಲಾಗಿದ್ದು, ಬೆಳವಣಿಯಾಗದ ಕೈ ಮತ್ತು ಬೆನ್ನುಮೂಳೆಯ ಕೆಲವು ಭಾಗಗಳನ್ನು ಹೊಂದಿತ್ತು ಎಂದು ವಸಾವಡಾ ಹೇಳಿದರು.
ಒಂದು ವಾರದ ಚಿಕಿತ್ಸೆಯ ಬಳಿಕ ಮಾರ್ಚ್ 4 ರಂದು ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿಯಾಗಿದೆ.