ಹೈದರಾಬಾದ್: ವ್ಹೀಲ್ ಚೇರ್ ಬೇಕಾದ್ರೆ 100 ರೂ. ಲಂಚ ಕೊಡಬೇಕು ಎಂದು ಸರ್ಕಾರಿ ಆಸ್ಪತ್ರೆಯ ಅಟೆಂಡರ್ ಹೇಳಿದ್ದರಿಂದ ಹಣವಿಲ್ಲದೆ ವ್ಯಕ್ತಿಯೊಬ್ಬರು ತಮ್ಮ ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಯೊಳಗೆ ಹೋದ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.
38 ವರ್ಷದ ದಸ್ವ ರಾಜು, 2016ರ ಅಗಸ್ಟ್‍ನಲ್ಲಿ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡಿದ್ರು. ದಸ್ವ ರಾಜು ಅವರನ್ನ ಗುರುವಾರದಂದು ಚೆಕಪ್‍ಗಾಗಿ ಗಾಂಧಿ ಆಸ್ಪತ್ರೆಯ 5ನೇ ಮಹಡಿಯಲ್ಲಿದ್ದ ವಾರ್ಡ್‍ಗೆ ಕರೆದುಕೊಂಡು ಹೋಗಬೇಕಿತ್ತು. ಈ ಲಂಚ ಕೊಡದಿದ್ದಕ್ಕೆ ನನ್ನ ಮೊಬೈಲ್ ಕಿತ್ತುಕೊಂಡಿದ್ರು ಎಂದು ಸಂತೋಷಿ ಹೇಳಿದ್ದಾರೆ. ಹೀಗಾಗಿ ದಸ್ವ ರಾಜು ತಮ್ಮ ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಗೆ ಹೋಗಿದ್ದಾರೆ.
Advertisement
Advertisement
ಗುರುವಾರ ಬೆಳಿಗ್ಗೆ ನಾವು ಚೆಕಪ್‍ಗಾಗಿ ಆಟೋದಲ್ಲಿ ಆಸ್ಪತ್ರೆಗೆ ಬಂದೆವು. ಇಲ್ಲಿ ವ್ಹೀಲ್ ಚೇರ್ ಬೇಕಾದ್ರೆ ಅಟೆಂಡರ್‍ಗೆ 100 ರೂ. ಲಂಚ ಕೊಡ್ಬೇಕು. ಕೆಲವೊಮ್ಮೆ ಅಷ್ಟು ಹಣ ಕೊಡಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಮಗನ ತ್ರಿಚಕ್ರ ಸೈಕಲ್ ತಂದೆವು ಅಂತ ಸಂತೋಷಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ನಮ್ಮ ಬಳಿ 100 ರೂ. ಹಣ ಇಲ್ಲವಾದ್ರೆ ಅಟೆಂಡರ್ ನನ್ನ ಮೊಬೈಲ್ ಕಿತ್ತಿಟ್ಟುಕೊಳ್ತಾರೆ. ಆಗ ನಾನು ನನ್ನ ಪರವಾಗಿ 100 ರೂ. ಕೊಡುವಂತೆ ಬೇರೆ ರೋಗಿಗಳ ಬಳಿ ಬೇಡಿಕೊಳ್ಬೇಕು ಅಂತ ಹೇಳಿದ್ದಾರೆ.
Advertisement
Advertisement
ರಾಜು ಅವರಿಗೆ 4 ಜನ ಮಕ್ಕಳಿದ್ದು, ಸದ್ಯ ಕೆಲಸ ಮಾಡಲಾರದ ಸ್ಥಿತಿಯಲ್ಲಿದ್ದಾರೆ. ಇವರ ಕುಟುಂಬವನ್ನು ಸದ್ಯಕ್ಕೆ ನೆರೆಮನೆಯವರಾದ ಆಟೋ ಚಾಲಕ ಮೊಹಮ್ಮದ್ ಸಾಫಿ ಎಂಬವರು ನೋಡಿಕೊಳ್ತಿದ್ದಾರೆ. ಸಾಧ್ಯವಾದಾಗಲೆಲ್ಲಾ ಅವರ ಅಟೋದಲ್ಲೇ ರಾಜು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ.
ಇವರಿಗೆ ನಡೆಯಲು ಕೂಡ ಆಗುವುದಿಲ್ಲ. ಹೀಗಿದ್ದರೂ ಇವರ ಪತ್ನಿ ಬಳಿ ಅಟೆಂಡರ್‍ಗಳು ವ್ಹೀಲ್‍ಚೇರ್‍ಗಾಗಿ 100 ರೂ. ಕೇಳ್ತಾರೆ. ಅವರು ಸೈಕಲ್ ತಳ್ಳಿಕೊಂಡು ಹೋಗೋದನ್ನು ನೋಡಿ ನನಗೆ ಕಣ್ಣೀರು ಬಂತು. ಇದರ ಬಗ್ಗೆ ದೂರು ಕೊಟ್ರೆ ಒಂದು ಬಾರಿ ಮಾತ್ರ ಅಟೆಂಡರ್ ಸಹಾಯ ಮಾಡ್ತಾನೆ. ಅನಂತರ ಮತ್ತೆ ಲಂಚ ಕೇಳ್ತಾರೆ ಅಂತ ಸಾಫಿ ಹೇಳಿದ್ದಾರೆ.
ರಾಜು ಅವರು ಸೈಕಲ್ ತಳ್ಳಿಕೊಂಡು ಹೋಗುತ್ತಿರುವುದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ವೀಡಿಯೋವನ್ನ ನೋಡಿದ್ದೇವೆ. ಇದು ನಿಜಕ್ಕೂ ಅಸಹನೀಯ. ಈ ಬಗ್ಗೆ ತನಿಖೆ ನಡೆಯುತ್ತಿದೆ ಅಂತ ಗಾಂಧಿ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕಿ ಡಾ. ಬಿಎಸ್‍ವಿ ಮಂಜುಳಾ ಹೇಳಿದ್ದಾರೆ.
ರಾಜು ಸುಮಾರು 3 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಮ್ಮ ಸಲಹೆಯನ್ನೂ ಮೀರಿ ಆಗಾಗ ಚೆಕಪ್‍ಗೆ ಬರುವುದಾಗಿ ಹೇಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡರು. ಅವರ ಕೊನೆಯ ಅಪಾಯಿಂಟ್‍ಮೆಂಟ್ ಇದ್ದಿದ್ದು ಸೋಮವಾರದಂದು. ಆಗ ಅವರಿಗೆ ವ್ಹೀಲ್ ಚೇರ್ ನೀಡಲಾಗಿತ್ತು. ಆದ್ರೆ ಅವರು ಮತ್ತೆ ಗುರುವಾರದಂದು ಯಾಕೆ ಬಂದ್ರು ಅಂತ ನಮಗೆ ಗೊತ್ತಿಲ್ಲ ಎಂದು ಮಂಜುಳಾ ಹೇಳಿದ್ದಾರೆ.