ಕಾರವಾರ: ಇಲ್ಲಿನ ಉಮ್ಮಳೆ ಜೋಗ್ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಿಲ್ಲ. ಮದುವೆಯಾಗಲೇಬೇಕು ಅಂದರೆ ಊರನ್ನ ಬಿಡಲೇ ಬೇಕು. ಇನ್ನು ಈ ಗ್ರಾಮದ ಜನರಿಗೆ ಸ್ವಂತ ಮನೆಯಿದ್ದರು ಬಾಡಿಗೆ ಮನೆಯಲ್ಲಿ ಇರುವ ಸ್ಥಿತಿ ಇಲ್ಲಿಯದ್ದು, ಇದೊಂದು ಶಾಪಗ್ರಸ್ಥ ಗ್ರಾಮವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ 20 ಕಿಲೋಮೀಟರ್ ದೂರದ ವೈಲವಾಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಉಮ್ಮಳೆ ಜೋಗ್ ಗ್ರಾಮದಲ್ಲಿ ಯುವಕರಿಗೆ ಮದುವೆಯಾಗದಂತೆ ಅಡ್ಡಿಯಾಗಿರುವುದು. ಈ ಗ್ರಾಮದ ಸುತ್ತಲೂ ಕಾಳಿ ನದಿನೀರು ಹರಿಯುತಿದ್ದು, ದ್ವೀಪ ಪ್ರದೇಶವಾಗಿದೆ. ಹೀಗಾಗಿ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು.
ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 500 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯವನ್ನು ನಂಬಿ ಬದುಕುತಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮಮನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇನ್ನು ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಭತ್ತ, ತೆಂಗು, ಬಾಳೆ ಫಸಲನ್ನು ಬೆಳಸುತ್ತೇವೆ. ಆದರೆ ಅವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ಕೊಂಡೊಯ್ಯಬೇಕಿದ್ದು ಬಲು ತ್ರಾಸದಾಯಕವಾಗಿದೆ. ಹೀಗಾಗಿ ಹಲವರು ವ್ಯವಸಾಯವನ್ನು ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೋಗಿಟ್ಟು ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಭೂಮಿಯನ್ನೇ ನಂಬಿ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರತಿಭಟನೆ ನಡೆಸಿ ಮನವಿ ಸಹ ನೀಡಿದ್ದಾರೆ. ಆದರೆ ಈವರೆಗೂ ಸರ್ಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ತಮ್ಮ ಊರಿಗೆ ಒಂದು ಸೇತುವೆಯಾದರೆ ಊರಿನಲ್ಲಿ ಮದುವೆಯಾಗದೇ ಉಳಿದ ಯುವಕರಿಗೆ ಮದುವೆ ಭಾಗ್ಯ ಸಿಗುತ್ತದೆ. ಕೆಲಸಮಾಡಲಾಗದೇ ಬರಡಾಗಿ ಬಿಟ್ಟ ಭೂಮಿ ಹಸನಾಗುತ್ತದೆ ಎಂಬ ಆಶಾ ಭಾವನೆಯಲ್ಲಿ ಈ ಗ್ರಾಮದವರು ಇಟ್ಟುಕೊಂಡಿದ್ದಾರೆ.