ಕಮಲ ಬಿಟ್ಟು ಕೈ ಸೇರಲಿದ್ದಾರಾ ಕತ್ತಿ? – ಸಿದ್ದರಾಮಯ್ಯ ಜೊತೆ ಚರ್ಚೆ

Public TV
2 Min Read
UMESH KATTI

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಬುಧವಾರ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಕತ್ತಿಯವರ ಈ ನಡೆ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಚಿವ ಸಂಪುಟ ರಚನೆಯಾದ ಬೆನ್ನಲ್ಲೆ ಬಿಜೆಪಿ ವಲಯದಲ್ಲಿ ಸಚಿವ ಸ್ಥಾನ ಸಿಗದ ನಾಯಕರು ಬಂಡಾಯ ಎದ್ದಿದ್ದಾರೆ. ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ ಸೇರಿ ಇತರೇ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರ ಜೊತೆ ಫೋನಿನಲ್ಲಿ ಮಾತನಾಡಿರುವುದು ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.

ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಉಮೇಶ್ ಕತ್ತಿ ಅವರು ಬಿಜೆಪಿ ನಾಯಕರ ಮೇಲೆ ಒತ್ತಡ ತರಲು ಸಿದ್ದರಾಮಯ್ಯ ಜೊತೆಗೆ ಮಾತನಾಡಿದರಾ? ಅವರನ್ನು ಭೇಟಿ ಮಾಡಲು ಹೋಗುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಕರೆಯಲ್ಲಿ ಉಮೇಶ್ ಕತ್ತಿಯವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಬಾದಾಮಿಯಿಂದ ಮರಳಿದ ಬಳಿಕ ಅವರನ್ನು ಕಚೇರಿಯಲ್ಲಿ ಭೇಟಿ ಆಗುತ್ತಾರೆ ಎನ್ನಲಾಗಿತ್ತು.

siddaramaiah 1

ಆದರೆ ಈ ಬಗ್ಗೆ ಉಮೇಶ್ ಕತ್ತಿ ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿ, ನಾನು ಸಿದ್ದರಾಮಯ್ಯ ಫೋನಿನಲ್ಲಿ ಮಾತನಾಡಿದ್ದು ನಿಜ, ಸಚಿವ ಸ್ಥಾನದ ಬಗ್ಗೆ ತಿಳಿದು ಅವರು ಕರೆ ಮಾಡಿದ್ದರು. ನಾನು, ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ ಎಲ್ಲಾ ಬಹಳ ವರ್ಷದಿಂದ ಸ್ನೇಹಿತರು, ಆದ್ದರಿಂದ ಮಾತನಾಡಿದ್ದೇವೆ ಅಷ್ಟೇ. ನಾನು ಬಿಜೆಪಿ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.

ನಿನ್ನೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಕರೆ ಮಾಡಿದ್ದರು. ನಾನು ಯಾರ ವೈರಿನೂ ಅಲ್ಲ, ಮಿತ್ರನೂ ಅಲ್ಲ. ನಾನು ಬಿಜೆಪಿಯವನು, ಬಿಜೆಪಿಯಲ್ಲೇ ಇರುತ್ತೇನೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನಲ್ಲೇ ಇರಲಿ. 20 ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ಜನತಾ ದಳದಲ್ಲಿ ಇದ್ದಾಗ ಇಬ್ಬರೂ ಸೇರಿ ಕೆಲಸ ಮಾಡಿದ್ದೇವೆ. ಸ್ನೇಹಿತರಾಗಿದ್ದರಿಂದ ನಿನ್ನೆ ಸಿದ್ದರಾಮಯ್ಯ ಅವರು ನನಗೆ ಫೋನ್ ಮಾಡಿದ್ದರು. ಸಚಿವ ಸ್ಥಾನದ ಬಗ್ಗೆ ಕೇಳಿದರು, ಆಗ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದೆ ಅಷ್ಟೇ. ಬಿಡುವಿದ್ದರೆ ಇಬ್ಬರು ಭೇಟಿಯಾಗುತ್ತೇವೆ. ಹಾಗಂತಾ ನಾನು ಬಿಜೆಪಿ ಬಿಟ್ಟು ಹೋಗಲ್ಲ. ಇಲ್ಲೇ ಇರುತ್ತೇನೆ. ಮಾಧ್ಯಮಗಳಲ್ಲಿ ಬೇಕಾದ ಹಾಗೆ ಸುದ್ದಿ ಬರುತ್ತಿದೆ ನಾನು ನೋಡುತ್ತಿದ್ದೇನೆ. ಆದರೆ ನಾನು ಬಿಜೆಪಿ ಬಿಡಲ್ಲ. ಈಗ ಕೇವಲ 17 ಮಂದಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಉಳಿದ ಸ್ಥಾನಗಳೂ ಇನ್ನೂ ನಿರ್ಧಾರವಾಗಿಲ್ಲ, ನೋಡೋಣ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *