ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಸಂದರ್ಭದಲ್ಲಿ ಜಾಗೃತನಾಗಿ ಕಾರ್ಯನಿರ್ವಹಿಸು, ಇಲ್ಲದಿದ್ದರೆ ಹೊಡೆಯುವುದಾಗಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಶಾಸಕ ಉಮೇಶ್ ಕತ್ತಿ ಸಭೆ ನಡೆಸಿದರು. ಈ ವೇಳೆ ಸಮರ್ಪಕ ವಿದ್ಯುತ್ ಕಲ್ಪಿಸದ ಹುಕ್ಕೇರಿ ವಿದ್ಯುತ್ ಸರಬರಾಜು ಸಂಘದ ಅಭಿಯಂತ ನೇಮಿನಾಥ್ ಖೇಮಲಾಪೂರೆಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ನಾನು ಕಳೆದ ಹಲವು ದಿನಗಳಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆ ಸೇರಿದಂತೆ ಕುಡಿಯುವ ನೀರು, ವಿದ್ಯುತ್ ನೀಡುವಲ್ಲಿ ಬೇಜವಾಬ್ದಾರಿ ವರ್ತನೆ ಮಾಡುತ್ತಿರುವೆ. ಇದು ಹೀಗೆ ಮುಂದುವರಿದ್ರೆ, ನಿನ್ನ ಅಮಾನತು ಮಾಡಿಸುತ್ತೇನೆ. ಮತ್ತೆ ಲಾಕ್‍ಡೌನ್ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ ಹೊಡೆಯುವುದಾಗಿ ಉಮೇಶ್ ಕತ್ತಿ ಎಚ್ಚರಿಕೆ ನೀಡಿದರು.
ಅಲ್ಲದೇ ಜನರಿಗೆ ನೀಡುತ್ತಿರುವ ಪಡಿತರ ವ್ಯವಸ್ಥೆಯಲ್ಲಿ, ಕುಡಿಯುವ ನೀರು ಸರಬರಾಜು, ಕೃಷಿ ಚಟುವಟಿಕೆಗಳು, ರೈತರು ಬೆಳೆದ ತರಕಾರಿಗೆ ಮಾರುಕಟ್ಟೆ ಕಲ್ಪಿಸಲು ಯಾವುದೇ ವ್ಯತ್ಯಯ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಉಮೇಶ್ ಕತ್ತಿ ಸೂಚನೆ ನೀಡಿದರು.
ಇದಕ್ಕೂ ಮೊದಲು ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಉಮೇಶ್ ಕತ್ತಿ ಮಾಹಿತಿ ಪಡೆದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ದಿನ ಬಳಕೆ ವಸ್ತುಗಳನ್ನ ಮಾರಾಟ ಮಾಡಿದರೆ ಅಂತಹವರ ಮೇಲೆ ಶಿಸ್ತು ಕ್ರಮಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.