ಸಿಎಂಗೆ ನಿತ್ಯ ಬೆಳಗ್ಗೆ ‘ಕತ್ತಿ’ ದರ್ಶನ

Public TV
1 Min Read
BSY KATTI

ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದಿದ್ದೇ ತಡ ಸಿಎಂ ಯಡಿಯೂರಪ್ಪ ಅವರು ಅದರ ಸಂಭ್ರಮವನ್ನೂ ಸರಿಯಾಗಿ ಅನುಭವಿಸದೇ ತಳಮಳ ಪಡುತ್ತಿದ್ದಾರೆ. ಭರ್ಜರಿ ಫಲಿತಾಂಶಕ್ಕೆ ಖುಷಿ ಪಡಬೇಕೋ ಇಲ್ಲ ಸಂಪುಟ ತಲೆನೋವು ಕಡಿಮೆ ಮಾಡಿಕೊಳ್ಳಬೇಕೋ ಅಂತ ಗೊತ್ತಾಗದೇ ಸಿಎಂ ತೊಳಲಾಡುತ್ತಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆಗೆ ಇನ್ನಷ್ಟು ವಿಳಂಬ ಆಗುವುದರಿಂದ ಸಿಎಂ ಅವರ ತಾಳ್ಮೆಯೂ ಕಮ್ಮಿಯಾಗತೊಡಗಿದೆ. ಇದೆಲ್ಲದರ ನಡುವೆ ಸಚಿವ ಸ್ಥಾನದ ಪ್ರಭಾವೀ ಆಕಾಂಕ್ಷಿ ಹಿರಿಯ ಶಾಸಕ ಉಮೇಶ್ ಕತ್ತಿ, ಸಿಎಂಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದ್ದಾರೆ.

umesh katti

ಸರ್ಕಾರದ ಮೊದಲ ಸಂಪುಟ ರಚನೆ ಬಳಿಕ ಮುನಿಸಿಕೊಂಡಿದ್ದ ಉಮೇಶ್ ಕತ್ತಿ, ಉಪಚುನಾವಣೆವರೆಗೂ ಸಿಎಂ ಭೇಟಿಗೆ ಅಷ್ಟಾಗಿ ಮನಸ್ಸು ಮಾಡುತ್ತಿರಲಿಲ್ಲ. ಆದರೆ ಯಾವಾಗ ಫಲಿತಾಂಶ ಬಂತೋ ಅಂದು ರಾತ್ರಿಯೇ ಬೆಳಗಾವಿಯಿಂದ ಹೊರಟ ಉಮೇಶ್ ಕತ್ತಿ ಬೆಂಗಳೂರಿನಲ್ಲೇ ಇದ್ದಾರೆ.

ಫಲಿತಾಂಶ ಬಂದ ನಂತರ ಸಚಿವ ಸ್ಥಾನ ಬೇಕೇ ಬೇಕು ಎಂದು ಶಾಸಕ ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಅವತ್ತಿನಿಂದಲೂ ನಿತ್ಯ ಎರಡು-ಮೂರು ಸಲ ಉಮೇಶ್ ಕತ್ತಿ ಸಿಎಂ ಭೇಟಿ ಮಾಡುತ್ತಿದ್ದಾರೆ. ಬೆಳಗ್ಗೆ ಎದ್ದರೆ ಸಾಕು ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರ ಧವಳಗಿರಿ ನಿವಾಸದಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಇಂದು ಸಹ ಬೆಳ್ಳಂಬೆಳಗ್ಗೆ 2 ಬಾರಿ ಉಮೇಶ್ ಕತ್ತಿ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಸಿಎಂಗೆ ಬೆಳಗ್ಗೆ ಎದ್ದರೆ ಕತ್ತಿಯವರೇ ದರ್ಶನ ಕೊಡುತ್ತಿದ್ದಾರೆ.

umesh e1576213073790

ಸಿಎಂ ನಿವಾಸ, ವಿಧಾನಸೌಧ, ಗೃಹ ಕಚೇರಿ ಕೃಷ್ಣಾ.. ಹೀಗೆ ಎಲ್ಲೆಂದರಲ್ಲಿ ಉಮೇಶ್ ಕತ್ತಿಯವರು ಸಿಎಂ ಭೇಟಿ ಮಾಡುತ್ತಿದ್ದಾರೆ. ಉಪಚುನಾವಣೆಗೂ ಮುನ್ನ ಕಾಣಿಸಿಕೊಳ್ಳದ ಶಾಸಕ, ಈಗ ನಿತ್ಯ ಸಿಎಂ ಎದುರು ಪ್ರತ್ಯಕ್ಷರಾಗಿ ಸಚಿವ ಸ್ಥಾನಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಮೇಶ್ ಕತ್ತಿ ಕಾಟದಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ಸಿಎಂ ಯೋಚನೆ ಮಾಡಿರೋದರಲ್ಲಿ ಅಚ್ಚರಿಯಿಲ್ಲ. ಸದ್ಯದ ಸನ್ನಿವೇಶದಲ್ಲಿ ಸಚಿವ ಸಂಪುಟ ವಿಸ್ತರಣೆ ಇನ್ನೊಂದು ತಿಂಗಳು ಆಗುವುದಿಲ್ಲ ಎಂಬ ಮಾತುಗಳು ಕೇಳಿಬರ್ತಿವೆ. ಇದು ನಿಜವಾದ್ರೆ ಅಲ್ಲಿಯವರೆಗೂ ಸಿಎಂ ಯಡಿಯೂರಪ್ಪ ಉಮೇಶ್ ಕತ್ತಿಯವರ ಈ ಕೊಸರಾಟವನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ.

 

Share This Article
Leave a Comment

Leave a Reply

Your email address will not be published. Required fields are marked *