ಮಂತ್ರಿ ಸ್ಥಾನ ನೀಡದ ಹೈಕಮಾಂಡ್ ಮುಂದೆ ಉಮೇಶ್ ಕತ್ತಿ ಹೊಸ ಬೇಡಿಕೆ

Public TV
2 Min Read
Umesh Katti

ನವದೆಹಲಿ: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದೆ ನಿರಾಶೆಗೊಂಡಿದ್ದ ಶಾಸಕ ಉಮೇಶ್ ಕತ್ತಿ ಹೊಸ ದಾಳ ಉರುಳಿಸಿದ್ದಾರೆ. ಮಂತ್ರಿ ಮಾಡಿ ಇಲ್ಲ ರಾಜ್ಯಸಭೆಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ.

ದೆಹಲಿಯಲ್ಲಿರುವ ಉಮೇಶ್ ಕತ್ತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಜೂನ್ ನಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಈ ಪೈಕಿ ಎರಡು ಬಿಜೆಪಿ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಒಂದು ಸ್ಥಾನವನ್ನು ತಮ್ಮ ಸಹೋದರನಿಗೆ ನೀಡುವಂತೆ ಮನವಿ ಮಾಡಿದ್ದಾರೆ.

BJP

ಚಿಕ್ಕೋಡಿ ಸಂಸದರಾಗಿದ್ದ ರಮೇಶ್ ಕತ್ತಿ ಲೋಕಸಭಾ ಸೀಟು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎನ್ನುವ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ಈ ಮೂಲಕ ಮಂತ್ರಿ ಮಾಡದ ಹೈಕಮಾಂಡ್ ಮುಂದೆ ಮತ್ತೊಂದು ಹೊಸ ಬೇಡಿಕೆಯ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.

ramesh katti

ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಅವರು, ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೇಳಲು ಬಂದಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಮನವಿ ಮಾಡುತ್ತೇನೆ ಎಂದರು. ಸಚಿವ ಸ್ಥಾನಕ್ಕೆ ಬದಲಿಯಾಗಿ ರಾಜ್ಯಸಭೆ ಸ್ಥಾನ ಕೇಳುತ್ತಿಲ್ಲ. ಉಮೇಶ್ ಕತ್ತಿ ಬೇರೆ ರಮೇಶ್ ಕತ್ತಿ ಬೇರೆ, ಇಬ್ಬರು ಸಹೋದರರು ಆದರೆ ಜೀವ ಬೇರೆ, ಮುಂದಿನ ದಿನದಲ್ಲಿ ನನಗೂ ಸಚಿವ ಸ್ಥಾನ ಸಿಗಬಹುದು. ಪ್ರತಿಬಾರಿ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತೆ. ಆದರೆ ಕಡೆ ಘಳಿಗೆಯಲ್ಲಿ ಹೆಸರು ಪಟ್ಟಿಯಿಂದ ಹೊರ ಉಳಿಯುತ್ತೆ. ಇದು ಹೊಸದಲ್ಲ ಎಂದು ಬಿಎಸ್‍ವೈ ವಿರುದ್ಧ ಪರೋಕ್ಷವಾಗಿ ಕುಟುಕಿದರು.

vlcsnap 2020 02 12 12h13m46s431

ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಪಕ್ಷದಲ್ಲಿ ಹಿರಿಯನಿದ್ದೇನೆ, ಇನ್ನೂ ಎರಡು ಬಾರಿ ಚುನಾವಣಾಗೆ ಸ್ಪರ್ಧಿಸಲಿದ್ದೇನೆ. ಮುಂದೆ ಮಂತ್ರಿಯಾಗಬಹುದು ಸಿಎಂ ಕೂಡ ಆಗಲೂಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕರಿಂದ ಮುಂದುವರಿದ ಲಾಬಿ:
ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿರುವ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಕಳೆದ ಬಾರಿಗೂ ಸಂತೋಷ ಸೇರಿ ಹಲವು ನಾಯಕರನ್ನ ಭೇಟಿ ಮಾಡಿ ಸಂಪುಟ ಸೇರಲು ಕಸರತ್ತು ನಡೆಸಿದ್ದರು. ಆದರೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ಕಡೆ ಘಳಿಗೆಯಲ್ಲಿ ಮಂತ್ರಿ ಮಾಡದಂತೆ ಬಿಎಸ್‍ವೈ ಹೈಕಮಾಂಡ್ ಸೂಚನೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *