ಬೆಂಗಳೂರು: ಕೊನೆಗೂ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ತೆರೆ ಬಿತ್ತು. ಎಲ್ಲ ಗೊಂದಲಗಳ ಮಧ್ಯೆಯೂ ವಲಸಿಗ 10 ಜನ ಸಚಿವರಾಗಿ ಪದಗ್ರಹಣ ಮಾಡಿದರು. ಆದರೆ ಇಷ್ಟಕ್ಕೆ ಎಲ್ಲವೂ ಮುಗಿದಿಲ್ಲ, ಬದಲಾಗಿ ಆರಂಭವಾಗಿದೆ.
ಸಚಿವ ಸಂಪುಟದಲ್ಲಿ ಮೂಲ ಬಿಜೆಪಿ ಶಾಸಕರ ಸೇರ್ಪಡೆಗೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ. ಮೂಲ ಬಿಜೆಪಿಗರ ಅಸಮಾಧಾನ, ಬೇಗುದಿ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಅನ್ನೋ ಆತಂಕದ ವಾತಾವರಣ ಸರ್ಕಾರದಲ್ಲಿ ಮನೆ ಮಾಡಿದೆ. ಇದರ ಆರಂಭಿಕ ಲಕ್ಷಣಗಳು ಇಂದಿನಿಂದಲೇ ಶುರು ಆಗಿವೆ. ಇಂದು ಸಿಎಂ ಬಿಎಸ್‍ವೈ ನಿವಾಸ ಧವಳಗಿರಿ ಎಂದಿನಂತಿರಲಿಲ್ಲ. ಇಷ್ಟು ದಿನ ಸಿಎಂ ಭೇಟಿಗೆ ಬರುತ್ತಿದ್ದ ಮೂಲ ಬಿಜೆಪಿ ಆಕಾಂಕ್ಷಿ ಶಾಸಕರು ಇಂದು ಸಿಎಂ ನಿವಾಸ ಧವಳಗಿರಿಯತ್ತ ತಿರುಗಿಯೂ ನೋಡಲಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಯಾವೊಬ್ಬ ಶಾಸಕರು ಕೂಡ ಸಿಎಂ ನಿವಾಸ, ಸಿಎಂ ಬಜೆಟ್ ಸಭೆ ನಡೆಸಿದ ಶಕ್ತಿ ಭವನಗಳ ಕಡೆ ಧಾವಿಸಲಿಲ್ಲ. ಸಂಪುಟ ವಿಸ್ತರಣೆ ತೀರ್ಮಾನಕ್ಕೂ ಮುನ್ನ ಸಿಎಂ ಭೇಟಿಗೆ ಬರುತ್ತಿದ್ದ ಶಾಸಕರು, ಇಂದು ಸಿಎಂ ಭೇಟಿಗೆ ಬರಲಿಲ್ಲ. ಎಲ್ಲೂ ಕಾಣಿಸಿಕೊಂಡೂ ಇಲ್ಲ.
Advertisement
Advertisement
ಮುಖ್ಯವಾಗಿ ಉಮೇಶ್ ಕತ್ತಿ, ಮಾಜಿ ಸಚಿವ ಸಿ.ಪಿ ಯೋಗೀಶ್ವರ್, ರಾಮದಾಸ್, ರೇಣುಕಾಚಾರ್ಯ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ತಿಪ್ಪಾರೆಡ್ಡಿ ಹೀಗೆ ಯಾರೊಬ್ಬರೂ ಸಿಎಂ ಭೇಟಿ ಮಾಡಲಿಲ್ಲ. ಸಚಿವ ಸ್ಥಾನ ವಂಚಿತ ಇವರೆಲ್ಲ ಸಿಎಂ ಮೇಲೆ ದೊಡ್ಡ ಮಟ್ಟದಲ್ಲಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಇಂದು ಯಾರೂ ಸಿಎಂ ಯಡಿಯೂರಪ್ಪ ಭೇಟಿಗೆ ಮನಸ್ಸು ಮಾಡಲಿಲ್ಲ. ಇನ್ನೂ ಕೆಲವು ದಿನಗಳ ಕಾಲ ವಂಚಿತ ಆಕಾಂಕ್ಷಿಗಳು ತಮ್ಮ ಮುನಿಸು ಮುಂದುವರಿಸಬಹುದು ಎನ್ನಲಾಗಿದೆ.