– ಖರ್ಗೆ, ಜಾಧವ್‍ರಿಂದ ಟೆಂಪಲ್ ರನ್
ಕಲಬುರಗಿ: ಚುನಾವಣೆ ಶುರುವಾಗುತ್ತಿದ್ದಂತೆ ರಾಜಕಾರಣಿಗಳಿಗೆ ಇದ್ದಕ್ಕಿದ್ದಂತೆ ದೇವರ ಭಕ್ತಿ ಜಾಸ್ತಿಯಾಗಿ ಬಿಡುತ್ತದೆ. ತೀವ್ರ ಜಿದ್ದಾ ಜಿದ್ದಿನ ಕ್ಷೇತ್ರವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರ ಇದೀಗ ಬಿಜೆಪಿ, ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದೆ. ಎರಡೂ ಪಕ್ಷದ ಘಟಾನುಘಟಿ ನಾಯಕರು ಕಣದಲ್ಲಿದ್ದು, ಸ್ಪರ್ಧೆಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಅಲ್ಲದೆ ಈ ನಡುವೆ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ನಾಮಪತ್ರ ಸಲ್ಲಿಸುವ ಮುನ್ನ ಚಿಂಚೋಳಿಯ ರೇವಣ ಸಿದ್ದೇಶ್ವರ ಮತ್ತು ಕಲಬುರಗಿಯ ಶ್ರೀಶರಣ ಬಸವೇಶ್ವರ ದೇವಸ್ಥಾನ ಸೇರಿ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದರು. ಅಲ್ಲದೆ ಕೋಡಿ ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಕೋಡಿ ಮಠದ ಶ್ರೀಗಳು ಕೂಡ ಜಾಧವ್ ಚುನಾವಣೆಯಲ್ಲಿ ಜಯಗಳಿಸುವುದಾಗಿ ಆಶೀರ್ವಾದ ಮಾಡಿದ್ದರು ಎಂದು ತಿಳಿದುಬಂದಿದೆ.
ವಿಶೇಷ ಅಂದರೆ ನಾಸ್ತಿಕನೆಂದು ಹೇಳಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಕೂಡ ದೇವರ ಮೊರೆ ಹೋಗಿದ್ದಾರೆ. ಈ ಮೂಲಕ ನಾನು ನಾಸ್ತಿಕನಲ್ಲ ದೇವರ ಭಕ್ತ ಎಂದು ಜನರಲ್ಲಿ ಬಿಂಬಿಸಲು ಮುಂದಾಗಿದ್ದಾರೆ. ಹೀಗಾಗಿ ಜಾಧವ್ ಭೇಟಿ ನೀಡಿದ್ದ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೂ ಖರ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇನ್ನು ಖರ್ಗೆ ಪತ್ನಿ ರಾಧಾಬಾಯಿ ಕೂಡ ಜ್ಯೋತಿಷಿಗಳ ಮೊರೆ ಹೋಗಿ ಪತಿ ನಾಮಪತ್ರ ಸಲ್ಲಿಸಬೇಕಾದ ಸಮಯವನ್ನು ನಿಗದಿ ಮಾಡಿದ್ದರು ಎನ್ನಲಾಗಿದೆ.