ಕಲಬುರಗಿ: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಮುಂಬೈಗೆ ಹಾರಿದ್ದಾರೆ.
ಜಾಧವ್ ಮುಂಬೈನಲ್ಲಿ ಎರಡನೇ ದಿನವೂ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದು, ಅಫಜಲ್‍ಪುರ, ಚಿತ್ತಾಪುರ, ಗುರುಮಠಕಲ್ ಭಾಗದ ಮತದಾರೊಂದಿಗೆ ನಿರಂತರ ಮೀಟಿಂಗ್ ಮಾಡಲಿದ್ದಾರೆ. ಕೆಲಸದ ನಿಮಿತ್ತ ಮುಂಬೈನಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದಾರರು ನೆಲೆಸಿದ್ದು, ಅವರ ಮನವೊಲಿಕೆಗೆ ರಣತಂತ್ರ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಮೇಶ್ ಜಾಧವ್ ಅವರು ಸತತ 11 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಪಣತೊಟ್ಟು ನಿಂತಿದ್ದಾರೆ. ಹೀಗಾಗಿ ಚುನಾವಣೆಗೂ ಮುನ್ನ ಎಲ್ಲಾ ಮತದಾರರನ್ನ ಕಲಬುರಗಿಗೆ ಕರೆತರುವ ವ್ಯವಸ್ಥೆ ಮಾಡುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಮತದಾರರಿಗೊಸ್ಕರ ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಜಾಧವ್ ಪ್ರಮುಖವಾಗಿ ಬಂಜಾರ ಸಮುದಾಯದ ಮತದಾರರನ್ನ ಭೇಟಿಯಾಗುತ್ತಿದ್ದು, ಇನ್ನು ಮತದಾರರನ್ನು ತರಲು ಹಲವು ಮುಖಂಡರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಶಾತಾಯಗತಾಯ ಲೋಕಸಭಾ ಚುನಾವಣೆ ಗೆಲ್ಲಲು ಜಾಧವ್ ತಂತ್ರ ರೂಪಿಸುತ್ತಿದ್ದಾರೆ. ಇಂದು ಸಹ ಸಭೆ ನಡೆಸಿ ಮಧ್ಯಾಹ್ನ ಅಥವಾ ಸಂಜೆ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ಅನರ್ಹತೆ ಕುರಿತು ನಡೆಸುತ್ತಿರುವ ವಿಚಾರಣೆಯಲ್ಲಿ ಭಾಗಿಯಾಗಲ್ಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv