ಒಟ್ಟಾವಾ: ರಷ್ಯಾ ಮತ್ತು ಉಕ್ರೇನ್ ನಡುವೆ ಭಾರೀ ಯುದ್ಧ ನಡೆಯುತ್ತಿದ್ದು, ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ದೇಶವನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಹಿನ್ನೆಲೆ ಉಕ್ರೇನ್ ನಿಂದ ಪಲಾಯನ ಮಾಡುವವರು ಕೆನಡಾದಲ್ಲಿ ಉಳಿದುಕೊಳ್ಳಬಹುದು ಎಂದು ಕೆನಡಾ ರಾಜಧಾನಿ ಒಟ್ಟಾವಾ ಗುರುವಾರ ತಿಳಿಸಿದೆ.
ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಪಲಾಯನ ಮಾಡುವ ಉಕ್ರೇನಿಯನ್ನರಿಗೆ ಮೂರು ವರ್ಷಗಳವರೆಗೆ ತಾತ್ಕಾಲಿಕ ಕೆನಡಾದ ನಿವಾಸ ಪರವಾನಗಿಯನ್ನು ನೀಡುವ ಹೊಸ ವಲಸೆ ಕಾರ್ಯಕ್ರಮವನ್ನು ಸ್ಥಾಪಿಸುವುದಾಗಿ ಒಟ್ಟಾವಾ ಘೋಷಿಸಿತು. ಇದರ ಜೊತೆಗೆ ಉಕ್ರೇನಿಯನ್ನರು ತಮ್ಮ ಕೆಲಸ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಈ ವೇಳೆ ತಿಳಿಸಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ
ಹೆಚ್ಚು ಉಕ್ರೇನಿಯನ್ ವಲಸೆಗಾರರನ್ನು ಕೆನಡಾ ಹೊಂದಿದೆ. ಅದರಲ್ಲಿಯೂ ವಿಶೇಷವಾಗಿ ಕೆನಡಾದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಉಕ್ರೇನ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆ ಕೆನಡಾ ಸರ್ಕಾರ ಉಕ್ರೇನಿಯನ್ನರು ಮೂರು ವರ್ಷಗಳವರೆಗೆ ತಾತ್ಕಾಲಿಕ ನಿವಾಸಿಗಳಾಗಿ ಕೆನಡಾದಲ್ಲಿ ಉಳಿಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಅರ್ಜಿದಾರರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಫಿಂಗರ್‌ಪ್ರಿಂಟ್‌ಗಳು ಮತ್ತು ಫೋಟೋ ರೂಪದಲ್ಲಿ ಒದಗಿಸಬೇಕಾಗುತ್ತದೆ. ಉಕ್ರೇನಿಯನ್ ನಿರಾಶ್ರಿತರು ಏಕಕಾಲದಲ್ಲಿ ಕೆಲಸ ಮತ್ತು ಅಧ್ಯಯನ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಘೋಷಣೆಯಲ್ಲಿ ವಿವರಿಸಲಾಗಿದೆ.
ಕೆನಡಾದ ಈಗಾಗಲೇ ನೆಲೆಸಿರುವ ಉಕ್ರೇನಿಯನ್ನರು ಮತ್ತು ಅವರ ಕುಟುಂಬಗಳು ಈ ಹೊಸ ಕ್ರಮಗಳಿಂದ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್
ಗುರುವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಎಣಿಕೆಯ ಪ್ರಕಾರ, ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ನಡೆಸುತ್ತಿರುವ ಮಾರಣಾಂತಿಕ ಆಕ್ರಮಣದಿಂದ ಇಲ್ಲಿವರೆಗೂ ಮೂರು ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪೋಲೆಂಡ್‍ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದೆ.