ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಯಾವುದೇ ನಿಲುವು ಪ್ರಕಟಿಸದೇ ತಟಸ್ಥ ಧೋರಣೆ ತೋರಿದ ಭಾರತಕ್ಕೆ ರಷ್ಯಾ ಭರ್ಜರಿ ಆಫರ್ ಪ್ರಕಟಿಸಿದೆ.
ಹೌದು. ರಷ್ಯಾ ದಾಳಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಾಣುತ್ತಿದೆ. ಈ ಬೆನ್ನಲ್ಲೇ ಭಾರೀ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ನೀಡಲು ರಷ್ಯಾ ಮುಂದಾಗಿದೆ ಎಂದು ವರದಿಯಾಗಿದೆ.
Advertisement
Advertisement
ಬ್ರೆಂಟ್ ಕಚ್ಚಾ ತೈಲ ದರಕ್ಕಿಂತ ಶೇ.25-27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ರಷ್ಯಾದ ಪ್ರತಿಷ್ಠಿತ ಕಚ್ಚಾ ತೈಲ ಕಂಪನಿಗಳಲ್ಲಿ ಒಂದಾದ ರೋಸ್ನೆಫ್ಟ್ ಆಯಿಲ್ ಕಂಪನಿಯೂ ಭಾರತಕ್ಕೆ ಬ್ರೆಂಟ್ ಕಚ್ಚಾ ತೈಲವನ್ನು ನೀಡಲು ಮುಂದಾಗಿದೆ.
Advertisement
ಕಳೆದ ಡಿಸೆಂಬರ್‌ನಲ್ಲಿ ಪುಟಿನ್ ಭಾರತಕ್ಕೆ ಬಂದಾಗ ರೋಸ್ನೆಫ್ಟ್ ಆಯಿಲ್ ಕಂಪನಿ ಹಾಗೂ ಭಾರತದ ತೈಲ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ 2022ರ ಕೊನೆಯವರೆಗೆ ಭಾರತಕ್ಕೆ 2 ಮಿಲಿಯನ್ ಟನ್ ತೈಲವನ್ನು ನೊವೊರೊಸಿಸ್ಕ್ ಬಂದರಿನ ಮೂಲಕ ರಫ್ತು ಮಾಡಲು ಒಪ್ಪಿಕೊಂಡಿತ್ತು.
Advertisement
ರಷ್ಯಾದ ಆಫರ್ ಭಾರತಕ್ಕೆ ಇಷ್ಟವಾಗಿದ್ದರೂ ಹಣ ವ್ಯವಹಾರ ಮಾಡುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರುಪಿ- ರೂಬೆಲ್ ಮೂಲಕ ವ್ಯವಹಾರ ನಡೆಸಬಹುದಾದರೂ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡುವ ಪ್ರಮಾಣ ಕಡಿಮೆ. ಶೇ.70 ರಷ್ಟು ತೈಲವನ್ನು ಒಪೆಕ್ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ
ಈಗ ಯಾಕೆ ಕಷ್ಟ?:
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿರುವ ಮಧ್ಯೆ, ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಪಶ್ಚಿಮ ದೇಶಗಳು ಅಂತರಾಷ್ಟ್ರೀಯ ಹಣಕಾಸು ವ್ಯವಹಾರ ವಿನಿಮಯ ಸಂಸ್ಥೆ ಸ್ವಿಫ್ಟ್ (Society For Worldwide Interbank Financial Telecommunications) ನಿಂದ ರಷ್ಯಾವನ್ನು ದೂರವಿಟ್ಟಿದೆ. ಇದರಿಂದಾಗಿ ಡಾಲರ್ ಮೂಲಕ ತೈಲವನ್ನು ಖರೀದಿ ಮಾಡುವುದು ಕಷ್ಟವಾಗಿದೆ.
ಏನಿದು ಸ್ವಿಫ್ಟ್ ?
SWIFT ಇದು ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆಯಾಗಿದ್ದು, ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ನಡೆಯಲು ನೆರವಾಗುವಂತಹ ವ್ಯವಸ್ಥೆ ಸ್ವಿಫ್ಟ್‍ನಲ್ಲಿದೆ. 1973ರಲ್ಲಿ ಬೆಲ್ಜಿಯಂನಲ್ಲಿ ಆರಂಭವಾದ ಸ್ವಿಫ್ಟ್ ನೆಟ್‍ವರ್ಕನಲ್ಲಿ 200 ದೇಶಗಳ 11 ಸಾವಿರ ಬ್ಯಾಂಕುಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಗಳು, ಸಂಸ್ಥೆಗಳ ಮಧ್ಯೆ ಲಕ್ಷ ಕೋಟಿ ಡಾಲರ್‌ಗಳ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ರಷ್ಯಾವನ್ನು ದೂರವಿಡಲು ತೀರ್ಮಾನ
ರಷ್ಯಾಗೆ ನಷ್ಟವೇನು?
ಸ್ವಿಫ್ಟ್‌ನ ಒಟ್ಟು ವ್ಯವಹಾರದಲ್ಲಿ ರಷ್ಯಾ ಪಾಲು ಶೇ.1 ರಷ್ಟಿದ್ದು, ಸ್ವಿಫ್ಟ್ ನೆರವಿಲ್ಲದೇ ಅಂತರಾಷ್ಟ್ರೀಯ ಆರ್ಥಿಕ ವ್ಯವಹಾರ ಕಷ್ಟವಾಗಬಹುದಾಗಿದೆ. ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ರಷ್ಯಾ ಒಬ್ಬಂಟಿಯಾಗಲಿದೆ. ದಿಗ್ಬಂಧನ ತಡೆದುಕೊಳ್ಳಲು ರಷ್ಯಾ ಬಳಿ 600 ಬಿಲಿಯನ್ ಡಾಲರ್‍ಗಳಷ್ಟು ಅಂತರಾಷ್ಟ್ರೀಯ ಮೀಸಲು ನಿಧಿ ಇದೆ. ಈ ಮೀಸಲು ನಿಧಿಯನ್ನು ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಳಸಿಕೊಳ್ಳದಂತೆ ಬ್ಯಾನ್ ಆಗಲಿದೆ. ಅಲ್ಲದೇ ಸ್ಥಳೀಯ ಕರೆನ್ಸಿಗಾಗಿ ಸೆಂಟ್ರಲ್ ಬ್ಯಾಂಕ್ ಬಳಿಯ ವಿದೇಶಿ ಆಸ್ತಿ ಮಾರಲಾಗುವುದಿಲ್ಲ. ವಿದೇಶಗಳಲ್ಲಿರುವ ರಷ್ಯಾದ ಮೀಸಲು ನಿಧಿ ಫ್ರೀಜ್ ಆಗಲಿದ್ದು, ರೂಬುಲ್ ಕರೆನ್ಸಿ ಮೌಲ್ಯ ಪತನಗೊಳ್ಳಲಿದೆ. ಆಗ ಇದರ ಬಳಕೆ ಕಷ್ಟವಾಗಬಹುದು. ಇದೆಲ್ಲದರ ಜೊತೆಗೆ ತೈಲ, ಅನಿಲ ಮಾರಾಟದಿಂದ ಬರುವ ಆದಾಯ ಗಣನೀಯವಾಗಿ ಕುಸಿಯಲಿದೆ. ರಷ್ಯಾದ ಆದಾಯದಲ್ಲಿ ತೈಲ, ಅನಿಲ ಮಾರಾಟದ ಪಾಲು ಶೇ.40 ರಷ್ಟಿದೆ. 2012ರಲ್ಲಿ ಸ್ವಿಫ್ಟ್‍ನಿಂದ ಇರಾನ್ ದೇಶವನ್ನು ಹೊರಗಿಡಲಾಗಿತ್ತು. ಇದರಿಂದ ಇರಾನ್ ಆರ್ಥಿಕವಾಗಿ ತುಂಬಾ ನಷ್ಟ ಅನುಭವಿಸಿತ್ತು. ಶೇಕಡಾ 50 ರಷ್ಟು ತೈಲಾದಾಯ, ಶೇಕಡಾ 30 ರಷ್ಟು ವಿದೇಶಿ ವ್ಯಾಪಾರ ಕಳೆದುಕೊಂಡಿತ್ತು.