ಉಕ್ರೇನ್‍ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳಿಗೆ 60 ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಕಲಿಕೆಗೆ ಅವಕಾಶ: ಸುಧಾಕರ್

Public TV
2 Min Read
SUDHAKAR MEETING

-ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಉನ್ನತ ಮಟ್ಟದ ಸಮಿತಿ ರಚನೆ

ಬೆಂಗಳೂರು: ಉಕ್ರೇನ್ ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು, ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲೇ ಅವರ ಕಲಿಕೆ ಮುಂದುವರಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

SUDHAKAR MEETING 1

ವಿಧಾನಸೌಧದಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ಹಾಗೂ ರಷ್ಯಾ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಿದೆ. ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 700ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಅವರ ಶೈಕ್ಷಣಿಕ ಭವಿಷ್ಯ ರೂಪಿಸುವ ಬಗ್ಗೆ ಅವರೊಂದಿಗೆ ಚರ್ಚಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಅದರಂತೆ ಚರ್ಚೆ ನಡೆಸಿದ್ದು, ತಾತ್ಕಾಲಿಕವಾಗಿ ಒಂದು ಅಭಿಪ್ರಾಯಕ್ಕೆ ಬರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ: ಆರಗ ಜ್ಞಾನೇಂದ್ರ

SUDHAKAR MEETING 3

ಮೊದಲ ವರ್ಷದಿಂದ ಆರಂಭವಾಗಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಇಲ್ಲಿದ್ದಾರೆ. ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿವೆ. ಈ ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ತಮ್ಮ ವ್ಯಾಸಂಗವನ್ನು ಆಯಾ ವರ್ಷದಲ್ಲೇ ಮುಂದುವರಿಸುವಂತೆ ಕ್ರಮ ವಹಿಸುವಂತೆ ತೀರ್ಮಾನಿಸಲಾಗಿದೆ. ಈಗ ನಡೆಯುತ್ತಿರುವ ತರಬೇತಿಯನ್ನೇ ಮುಂದುವರಿಸಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಒಂದು ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಮೆಡಿಕಲ್ ಕಾಲೇಜುಗಳ ಕೆಲ ಡೀನ್ ಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಉಕ್ರೇನ್‍ನಿಂದ ಹಿಂದಿರುಗಿದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು, ಎನ್‍ಎಂಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಬೇಡಿಕೆಗಳನ್ನು ಸಿದ್ಧಪಡಿಸುವ ಕೆಲಸವನ್ನು ಈ ಸಮಿತಿ ಮಾಡಲಿದೆ. ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಸಚಿವರ ಮುಂದೆ ಇಡಲಾಗುವುದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಕ್ರಮ ವಹಿಸುತ್ತಿದ್ದಾರೆ ಎಂದರು.

SUDHAKAR MEETING 2

ಯುದ್ಧ ಬೇಗ ಕೊನೆಯಾಗಲಿ ಎಂಬುದೇ ಎಲ್ಲರ ಆಶಯ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಲಿದೆ ಎಂದು ಗಮನಿಸಿ ಕಾನೂನಿನ ಚೌಕಟ್ಟಿನೊಳಗೆ ಕ್ರಮ ವಹಿಸಿ ಅವರ ಉತ್ತಮ ಭವಿಷ್ಯಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಸುರಕ್ಷಿತವಾಗಿ ಹಿಂದಿಗಿರುವುದೇ ದೊಡ್ಡ ಭಾಗ್ಯ. ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿ ಬೆಳಗಬೇಕಿದೆ. ಎಲ್ಲರೂ ಉತ್ತಮ ಮನೋಸ್ಥೈರ್ಯದಿಂದ ಇರಬೇಕು. ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇತ್ತು. ಈಗ ಸರ್ಕಾರ ಮಾಡಿರುವ ತೀರ್ಮಾನಕ್ಕೆ ವಿದ್ಯಾರ್ಥಿಗಳು ಕೂಡ ಒಪ್ಪಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಮಾರ್ಪಾಡು ತರುವ ಬಗ್ಗೆ ವಿದ್ಯಾರ್ಥಿಗಳು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಮೂರು ಕೃಷಿ ಕಾಯ್ದೆಗಳಿಗೆ ಶೇ.86 ರೈತ ಸಂಘಟನೆಗಳ ಬೆಂಬಲವಿತ್ತು: ʻಸುಪ್ರೀಂʼ ಸಮಿತಿ ವರದಿ ಬಹಿರಂಗ

ಶುಲ್ಕ ಇಲ್ಲ:
ಸದ್ಯಕ್ಕೆ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಆದರೆ ಅವರ ಕಲಿಕೆ, ತರಬೇತಿಯನ್ನು ಇಲ್ಲಿ ಮುಂದುವರಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ. ಉಚಿತವಾಗಿಯೇ ಶಿಕ್ಷಣ ಮುಂದುವರಿಸಬಹುದು. ಸಮಿತಿಯಿಂದ ಕೇಂದ್ರ ಸರ್ಕಾರಕ್ಕೆ ಎಲ್ಲ ಬಗೆಯ ಮನವಿಗಳನ್ನು ಸಲ್ಲಿಸಲಾಗುವುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *