ಬೆಂಗಳೂರು: ನವೀನ್ ಸಾವು ಬಹಳ ದುಃಖ ತರಿಸಿದೆ. 2-3 ದಿನಗಳಲ್ಲಿ ಪಾರ್ಥಿವ ಶರೀರವನ್ನು ತರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ನವೀನ್ ಮೃತಪಟ್ಟಿದ್ದಾರೆ. 4ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಒಂದು ವಾರದಿಂದ ಬಂಕರ್‌ನಲ್ಲಿದ್ದರು. ಆದರೆ ಇವತ್ತು ರೈಲ್ವೆ ಸ್ಟೇಷನ್ ಮೂಲಕ ಹೊರಗೆ ಬಂದಿದ್ದಾನೆ. ಏರ್‌ಸ್ಟ್ರೈಕ್ ವೇಳೆ ಶೆಲ್ ಬಡಿದು ಅವರು ಸಾವನ್ನಪ್ಪಿದ್ದಾರೆ. ನವೀನ್ ಜೊತೆಗೆ ಅವರ ಊರಿನವರೇ ಇನ್ನಿಬ್ಬರು ಸ್ನೇಹಿತರಿದ್ದರು. ಅದರಲ್ಲಿ ಚಳ್ಳಗೆರೆಯ ಓರ್ವನಿಗೆ ಗಾಯವಾಗಿದೆ. ಇನ್ನೊಬ್ಬರಿಗೆ ಅದೃಷ್ಟವಶಾತ್ ಏನು ಆಗಿಲ್ಲ. ವಿದೇಶಾಂಗ ಇಲಾಖೆ ನವೀನ್ ಸಾವನ್ನು ದೃಢಪಡಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ : ಉಕ್ರೇನ್ ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು
ನವೀನ್ ಅವರ ತಂದೆ ಜೊತೆ ಮಾತಾಡಿದ್ದೇನೆ. ನನಗೆ ಬಹಳ ಬೇಕಾದ ಕುಟುಂಬದವರಾಗಿದ್ದಾರೆ. ಅವರ ಸೋದರ ಸಂಬಂಧಿ ನನ್ನ ಸ್ನೇಹಿತರಾಗಿದ್ದು ದುಬೈನಲ್ಲಿದ್ದಾರೆ. ವಿದೇಶಾಂಗ ಇಲಾಖೆಯ ಸಚಿವರ ಜೊತೆ ಮಾತಾಡಿದ್ದೇನೆ. ಸದ್ಯ ಅಲ್ಲಿನ ವಾರ್ ಝೋನ್ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ನಮ್ಮ ದೇಶಕ್ಕೆ ಮೃತದೇಹವನ್ನು ತರುವ ಕೆಲಸ ಮಾಡುತ್ತಿದ್ದೇವೆ. ಮೋದಿ ಅವರೊಂದಿಗೂ ಮಾತನಾಡಿದ್ದೇನೆ. ನವೀನ್ ಅವರ ಕುಟುಂಬದ ಜೊತೆ ಮೋದಿ ಅವರು ಸಹ ಮಾತನಾಡಿದ್ದಾರೆ. ಸದ್ಯಕ್ಕೆ ಪಾರ್ಥಿವ ಶರೀರ ತರಲು ಸಾಧ್ಯವಾಗದೇ ಇದ್ದರೂ, 2-3 ದಿನಗಳಲ್ಲಿ ಮೃತದೇಹವನ್ನು ತರಲು ಸಾಧ್ಯವಾಗುತ್ತದೆಯಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ನವೀನ್ ಸಾವು ಬಹಳ ದುಃಖತರಿಸಿದೆ ಎಂದು ಹೇಳುತ್ತಾ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಭಾವುಕರಾದರು. ಇದನ್ನೂ ಓದಿ : ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು