ಕಲಬುರಗಿ: ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಿಲಿಂಡರ್ ವಿತರಿಸುವತಂಹ ಮಹತ್ವದ ಯೋಜನೆ ಜಾರಿಗೆ ತಂದಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ಪ್ರಮಾಣಪತ್ರದ ಜೊತೆಗೆ ಈ ಗ್ಯಾಸ್ ವಿತರಿಸುತ್ತಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಸ್ಕೀಂ ಅನ್ನು ಕಮಲ ನಾಯಕರು ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಮಹಿಳೆಯರು ಹೊಗೆಯಾಡುವ ಒಲೆ ಮುಂದೆ ಕುಳಿತು ಕಣ್ಣೀರು ಹಾಕ್ತಾ ಮನೆ ಮಂದಿಗೆಲ್ಲಾ ಆಹಾರ ತಯಾರಿಸುತ್ತಿದ್ದರು. ಇದನ್ನು ತಪ್ಪಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಉಜ್ವಲ್ ಯೋಜನೆಯಡಿ, ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆ ತಂದಿದ್ದಾರೆ. ದುರಂತ ಅಂದ್ರೆ ಕಲಬುರಗಿ ಜಿಲ್ಲೆಯಲ್ಲಿ ಈ ಯೋಜನೆಯ ಲಾಭ ಪಡೆಯಬೇಕಂದ್ರೆ ಆ ಕುಟುಂಬ ಬಿಜೆಪಿ ಸದಸ್ಯತ್ವ ಹೊಂದಿರಬೇಕು. ಸದಸ್ಯತ್ವ ಹೊಂದಿದವರಿಗೆ ಮಾತ್ರ ಬಿಜೆಪಿ ಸ್ಥಳೀಯ ನಾಯಕರು ಉಚಿತ ಸಿಲಿಂಡರ್ ನೀಡುತ್ತಿದ್ದಾರೆ. ಈ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
Advertisement
Advertisement
ಶಹಬಾದ ತಾಲೂಕಿನ ವ್ಯಾಪ್ತಿಯಲ್ಲಿರುವ ಮರತೂರ ಗ್ರಾಮದ ಬಿಜೆಪಿ ಮುಖಂಡರಾದ ಶಿವಲಿಂಗಯ್ಯ, ಅಶೋಕ, ರಾಜು ಮತ್ತು ದತ್ತು ಸಿಂಗ್ ಎಂಬವರು ನಿಯಮಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರಿ ಅಧಿಕಾರಿಗಳು ಮತ್ತು ಗ್ಯಾಸ್ ವಿತರಕರು ನಿಯಮಗಳನ್ನು ಗಾಳಿಗೆ ತೂರಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
Advertisement
Advertisement
ಉಜ್ವಲ ಯೋಜನೆಗಾಗಿ ಅರ್ಜಿ ಸಲ್ಲಿಸಿರುವ ಬಿಪಿಎಲ್ ಅರ್ಜಿದಾರರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ಪ್ರತಿ ಹಳ್ಳಿಗೂ ತೆರಳಿ ನಮ್ಮ ಕಾರ್ಯಕರ್ತರು ಮೋದಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸದಸ್ಯತ್ವಕ್ಕೂ ಮತ್ತು ಉಜ್ವಲ್ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ ಪ್ರಿಯಾಂಕ್ ಖರ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಲಬುರಗಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.