ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಶುಕ್ರವಾರ (ಆ.1) ಪ್ರಕಟಿಸಿದೆ.
ಈ ಕುರಿತು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಫಲಿತಾಂಶಕ್ಕೆ ಆಕ್ಷೇಪಣೆಗಳು ಇದ್ದಲ್ಲಿ ಆ.2ರಂದು ಬೆಳಿಗ್ಗೆ 11 ಗಂಟೆ ಒಳಗೆ ಇ-ಮೇಲ್ ಮೂಲಕ ಕೆಇಎಗೆ ಸಲ್ಲಿಸಬಹುದು. ಅದರ ನಂತರ ಪರಿಶೀಲಿಸಿ, ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪರಮೇಶ್ವರ್ ಎಚ್ಚರಿಕೆ
ಅಂತಿಮ ಫಲಿತಾಂಶ ಪ್ರಕಟಣೆ ನಂತರ ವೈದ್ಯಕೀಯ ಕೋರ್ಸ್ ಹೊರತುಪಡಿಸಿ, ಎಂಜಿನಿಯರಿಂಗ್, ಕೃಷಿ ಇತ್ಯಾದಿ ಕೋರ್ಸ್ಗಳ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಇನ್ನೂ ಪ್ರಕಟವಾಗದಿರುವ ಕಾರಣ, ಆ ಕೋರ್ಸ್‌ಗಳ ಪ್ರವೇಶಕ್ಕೆ ಸದ್ಯಕ್ಕೆ ರಾಜ್ಯದಲ್ಲಿ ಕೂಡ ಅವಕಾಶ ಇರುವುದಿಲ್ಲ. ಅಲ್ಲಿ ಫಲಿತಾಂಶ ಪ್ರಕಟವಾದ ನಂತರ ಆ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಸೀಟು ಹಂಚಿಕೆ ನಂತರ ಅಭ್ಯರ್ಥಿಗಳು ತಮಗೆ ಸಿಕ್ಕಿರುವ ಸೀಟು ಇಷ್ಟವಿದಿಯೊ/ಇಲ್ಲವೊ ಎಂಬುದನ್ನು ಕಡ್ಡಾಯವಾಗಿ ಆಯ್ಕೆಗಳನ್ನು ದಾಖಲಿಸುವುದರ ಮೂಲಕ ತಿಳಿಸಬೇಕು. ಒಂದು ವೇಳೆ ಆಯ್ಕೆಗಳನ್ನು ದಾಖಲಿಸದೇ ಇದ್ದಲ್ಲಿ, ಅಂತಹವರನ್ನು ನಂತರದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ. ಹಾಗೂ ಅವರನ್ನು ಇಡೀ ಪ್ರಕ್ರಿಯೆಯಿಂದಲೇ ಹೊರಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಆಯ್ಕೆಗಳು ಏನು? ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳು ತಮಗೆ ಸಿಕ್ಕಿರುವ ಕೋರ್ಸ್/ಕಾಲೇಜು ಇಷ್ಟ ಆಗಿದ್ದು, ಪ್ರವೇಶ ಪಡೆಯುತ್ತೇವೆ ಎನ್ನುವವರು ಆಯ್ಕೆ-1ನ್ನು ದಾಖಲಿಸಬೇಕು. ಸಿಕ್ಕಿರುವ ಕೋರ್ಸ್/ಕಾಲೇಜು ಪರವಾಗಿಲ್ಲ. ಆದರೆ, ಇನ್ನೂ ಉತ್ತಮ ಕಾಲೇಜು ಸಿಕ್ಕಿದರೆ ಅಲ್ಲಿ ಪ್ರವೇಶ ಪಡೆಯುತ್ತೇವೆ ಎನ್ನುವವರು ಆಯ್ಕೆ-2ನ್ನು ದಾಖಲಿಸಬೇಕು. ಸಿಕ್ಕಿರುವ ಕಾಲೇಜು/ಕೋರ್ಸ್ ಇಷ್ಟ ಇಲ್ಲ ಎನ್ನುವವರು ಆಯ್ಕೆ-3ನ್ನು ದಾಖಲಿಸಬೇಕು. ಅಂತಹವರಿಗೆ ಸಿಕ್ಕಿರುವ ಸೀಟು ಹೊರತುಪಡಿಸಿ, ದಾಖಲಿಸಿರುವ ಇತರ ಎಲ್ಲ ಇಚ್ಛೆ/ಆಯ್ಕೆಗಳನ್ನು ಎರಡನೇ ಸುತ್ತಿನಲ್ಲಿ ಪರಿಗಣಿಸಲಾಗುತ್ತದೆ. ನನಗೆ ಯಾವುದೂ ಬೇಡ, ಕೆಇಎ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಹೋಗುತ್ತೇನೆ ಎನ್ನುವವರು ಆಯ್ಕೆ-4ನ್ನು ದಾಖಲಿಸಬಹುದು. ಒಟ್ಟಿನಲ್ಲಿ ಯಾವುದೇ ಆಯ್ಕೆ ದಾಖಲಿಸುವುದಕ್ಕೂ ಮುನ್ನ ಪೋಷಕರ ಜೊತೆ ಹತ್ತಾರು ಬಾರಿ ಚರ್ಚೆ ಮಾಡಿಯೇ ದಾಖಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಆಯ್ಕೆ-1 ಮತ್ತು 2 ದಾಖಲಿಸಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಆದರೆ, ಆಯ್ಕೆ-3 ಮತ್ತು 4 ದಾಖಲಿಸಿದವರು ನಿಗದಿತ ಕೊನೆಯ ದಿನಾಂಕದೊಳಗೆ ಪುನಃ ವ್ಯವಸ್ಥೆಯೊಳಗೆ ಬಂದು, ಆಯ್ಕೆ-1 ಅಥವಾ ಆಯ್ಕೆ-2 ದಾಖಲಿಸುವುದಕ್ಕೆ ಈ ಬಾರಿ ಹೊಸದಾಗಿ ಅವಕಾಶ ನೀಡಲಾಗಿದೆ. ಕಳೆದ ಬಾರಿ ಅನೇಕ ಪೋಷಕರು ತಮಗೆ ಗೊತ್ತಿಲ್ಲದೆ ಸೈಬರ್ ಸೆಂಟರ್‌ನವರು ಆಯ್ಕೆ ದಾಖಲಿಸಿದ್ದಾರೆಂದು ಅಳಲು ತೋಡಿಕೊಂಡಿದ್ದರು. ಹೀಗಾಗಿ ಈ ಬಾರಿ ಸಣ್ಣ ಬದಲಾವಣೆ ಮಾಡಿದ್ದು, ಎಚ್ಚರಿಕೆಯಿಂದ ಸದುಪಯೋಗಪಡಿಸಿಕೊಳ್ಳಬೇಕು ಎಂದಿದ್ದಾರೆ.
ಕಾಲೇಜು ಹಂತದಲ್ಲೇ ವೈದ್ಯಕೀಯ ದಾಖಲೆ ಪರಿಶೀಲನೆ:
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಈ ಬಾರಿ ಕೆಇಎಗೆ ಬರುವ ಅಗತ್ಯ ಇರುವುದಿಲ್ಲ. ಬದಲಿಗೆ, ಸದರಿ ಕಾಲೇಜುಗಳಲ್ಲೇ ಮೂಲ ದಾಖಲೆ ಪರಿಶೀಲನೆ ಮಾಡಿಸಿ, ಅಲ್ಲಿಯೇ ಹಸ್ತಾಂತರಿಬೇಕು. ಈವರೆಗೂ ಖಾಸಗಿ ಕಾಲೇಜುಗಳಿಗೆ ಹಂಚಿಕೆಯಾದ ಸೀಟುಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಸಂಗ್ರಹವನ್ನು ಕೆಇಎಯೇ ಮಾಡಿ, ನಂತರ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಕಳುಹಿಸುತ್ತಿತ್ತು. ಇದರಿಂದ ಸಾಕಷ್ಟು ಅನಾನುಕೂಲ ಕೂಡ ಆಗುತ್ತಿತ್ತು ಎಂದು ಹೇಳಿದ್ದಾರೆ.ಇದನ್ನೂ ಓದಿ: ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ