ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ಯುಗಾದಿ’ ಎಂಬ ಪದ ವ್ಯುತ್ಪತ್ತಿಯಾಗಿದೆ. ಇದರ ಅರ್ಥ ಹೊಸ ಯುಗದ ಆರಂಭ. ಬ್ರಹ್ಮ ದೇವನು ಈ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದ. ಬ್ರಹ್ಮನು (Brahma) ಜಗತ್ತನ್ನು ಚೈತ್ರಶುದ್ಧ ಪ್ರತಿಪತೆಯಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳನ್ನೂ ಸೃಷ್ಟಿಸಿ ಕಾಲಗಣನೆ ಆರಂಭಿಸಿದ. ರೋಮನ್ನರಿಗೆ ಜನವರಿಯ ಮೊದಲನೇ ದಿನವಿದ್ದಂತೆ, ಹಿಂದೂಗಳಿಗೆ ‘ಯುಗದ’ ಆದಿಯ ದಿನ ಮೊದಲ ದಿನ.
ಒಂದು ಯುಗಾದಿಯಿಂದ (Ugadi) ಮತ್ತೊಂದು ಯುಗಾದಿಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದನ್ನು ವಿಜ್ಞಾನ ಕೂಡಾ ಒಪ್ಪಿಕೊಂಡಿದೆ. ನಮ್ಮ ಒಂದು ವರ್ಷವೆಂದರೆ ಬ್ರಹ್ಮನಿಗೆ ಒಂದು ದಿನ. ಈ ಕಾರಣಕ್ಕೆ ಹಿಂದೂಗಳು ಜನವರಿಗೆ ಹೊಸ ವರ್ಷವನ್ನು ಆಚರಿಸದೇ ಯುಗಾದಿಗೆ ಆಚರಿಸಿಕೊಳ್ಳುತ್ತಾರೆ. ಭಾರತದ ಹಣಕಾಸು ವರ್ಷ ಸಹ ಏಪ್ರಿಲ್ 1 ರಿಂದ ಆರಂಭವಾಗಿ ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತದೆ. ಇದನ್ನೂ ಓದಿ: ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!
- Advertisement -
- Advertisement -
ಪಂಚಾಂಗ ಶ್ರವಣ (Ugadi Panchangam) ಮಾಡುವುದು ಯುಗಾದಿ ಹಬ್ಬದ ವಿಶೇಷ ಆಚರಣೆ. ಇಂದು ನಾವು ಪ್ರಯಾಣ ಮಾಡುವಾಗ ಗೂಗಲ್ ಮ್ಯಾಪ್ ನೋಡಿಕೊಂಡು ಪ್ರಯಾಣ ಮಾಡುತ್ತೇವೆ. ಮಳೆ ಇದೆಯೋ ಇಲ್ವೋ ಎಂಬುದನ್ನು ತಿಳಿಯಲು ಹವಾಮಾನ ವರದಿಯನ್ನು ನೋಡಿಕೊಳ್ಳುತ್ತೇವೆ. ನಾವು ತೆರಳುವ ಜಾಗದಲ್ಲಿ ಜೋರಾಗಿ ಮಳೆ ಬರುವ ಮುನ್ಸೂಚನೆ ಇದ್ದರೆ ಪ್ರಯಾಣವನ್ನು ರದ್ದು ಮಾಡುತ್ತೇವೆ. ಇದೇ ರೀತಿಯಾಗಿ ಮುಂದಿನ ನಮ್ಮ ಯೋಜನೆಗಳು ಯಾವ ದಿನ ಕೈಗೊಂಡರೆ ಯಶಸ್ಸು ಸಿಗುತ್ತದೆ? ಏನೇನು ಸಮಸ್ಯೆಗಳು ಎದುರಾಗಬಹುದು? ಮುಂದಿನ ಯುಗಾದಿಯವರೆಗೆ ಭವಿಷ್ಯ ಹೇಗಿರಲಿದೆ? ಎಂಬುದನ್ನು ಪಂಚಾಂಗದ ಮೂಲಕ ತಿಳಿದುಕೊಳ್ಳುತ್ತೇವೆ.
- Advertisement -
ಪಂಚಾಂಗದ ಪ್ರಕಾರ ಫಲಾಫಲಗಳನ್ನು, ಉಪಯುಕ್ತ ದಿನಗಳನ್ನೂ ತಿಳಿದುಕೊಂಡ ಬಳಿಕ ವ್ಯಾಪಾರ, ವ್ಯವಸಾಯ, ವ್ಯವಹಾರಗಳನ್ನು ಆರಂಭಿಸಿಕೊಳ್ಳಬಹುದು. ಯುಗಾದಿಯಂದು ಪಾಡ್ಯ ಬರುವಾಗ ಹೊಸಸಂವತ್ಸರದ ತಿಥಿ, ವಾರ, ನಕ್ಷತ್ರಾದಿಗಳು ಉದಯಿಸುತ್ತ ಆದ್ದರಿಂದ ಪಾಡ್ಯಮಿಯಂದು ಹಬ್ಬದ ಆಚರಣೆ, ಬಿದಿಗೆಯಂದು ಚಂದ್ರದರ್ಶನ ಮಾಡಲಾಗುತ್ತದೆ.
- Advertisement -
ಪಂಚಾಂಗದಲ್ಲಿ ಆ ವರ್ಷದ ಮಳೆ ಬೆಳೆಗಳ ಬಗ್ಗೆ, ಮಾಸಫಲಗಳ ಬಗ್ಗೆ, ರಾಶಿಫಲ ಇತ್ಯಾದಿಗಳ ಬಗ್ಗೆ ತಿಳಿಸಲಾಗಿರುತ್ತದೆ. ಹೀಗೆ ಈ ಎಲ್ಲವನ್ನೂ ಮುಂಚೆಯೇ ತಿಳಿದಿದ್ದಾಗ ಅದಕ್ಕನುಗುಣವಾಗಿ ವರ್ಷದ ವ್ಯವಹಾರ ವಹಿವಾಟುಗಳ ಯೋಜನೆ ರೂಪಿಸಿಕೊಳ್ಳಬಹುದು. ಇದನ್ನೂ ಓದಿ: ಮರೆಯದಂಥ ಸವಿಸವಿ ಗಳಿಗೆ ತಂದಿತು ʻಯುಗಾದಿʼ
ಯಾವ ತಿಥಿಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಯಾವ ವಾರ, ನಕ್ಷತ್ರದಲ್ಲಿ ಏನು ಮಾಡಿದರೆ ಶುಭವಾಗುತ್ತದೆ? ಯಾರಿಗೆ ಯಾವ ಯೋಗವಿದೆ ಎಲ್ಲವೂ ವಿವರವಾಗಿರುತ್ತದೆ. ಇವೆಲ್ಲವನ್ನೂ ಸುತ್ತಲಿನ ಗ್ರಹಗಳು ಹಾಗೂ ನಕ್ಷತ್ರಗಳ ಆಧಾರದಲ್ಲಿಯೇ ಲೆಕ್ಕ ಹಾಕಲಾಗಿರುತ್ತದೆ. ಈ ಲೆಕ್ಕಾಚಾರದ ಆಧಾರದ ಮೇಲೆ ನಾವು ನಮ್ಮ ಮುಂದಿನ ಕೆಲಸಗಳನ್ನು ಮಾಡಲು ಯೋಜನೆ ರೂಪಿಸಿಕೊಳ್ಳಬಹುದು.
ಈ ದಿನ ಈ ಪಂಚಾಂಗ ಪಠಣ ಹಾಗೂ ಶ್ರವಣದಿಂದ ಸುಖ, ಐಶ್ವರ್ಯ, ಯಶಸ್ಸು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಪಂಚಾಂಗ ಶ್ರವಣವು ಮಹಾಭಾರತ ಕಾಲದಿಂದಲೂ ಸಂಪ್ರದಾಯವಾಗಿ ನಡೆದು ಬಂದಿದೆ. ಈಗಲೂ ಹಲವು ದೇವಸ್ಥಾನಗಳಲ್ಲಿ ಯುಗಾದಿಯ ಬೆಳಗ್ಗೆ ಹಾಗೂ ಸಂಜೆ ಸಾಮೂಹಿಕವಾಗಿ ಪಂಚಾಂಗ ಪಠಣ ಕಾರ್ಯಕ್ರಮಗಳು ನಡೆಯುತ್ತವೆ.