ಹಿಂದೂಗಳ ಹೊಸ ವರ್ಷ ಸಂಭ್ರಮದ ಹಬ್ಬ ಯುಗಾದಿ (Ugadi). ಈ ಹಬ್ಬದ ಮಾರನೆಯ ದಿನ ರಾಜ್ಯದೆಲ್ಲೆಡೆ ‘ಹೊಸ ತೊಡಕು’ ಆಚರಿಸುವುದುಂಟು. ಕೆಲವೆಡೆ ಇದನ್ನು ‘ವರ್ಷ ತೊಡಕು’, ‘ವರ್ಷ ತುಡುಕು’, ‘ವರ್ಷದ ಹೆಚ್ಚು’ ಎಂದೆಲ್ಲ ಕರೆಯಲಾಗುತ್ತದೆ. ಆ ಮಾಂಸಾಹಾರಿಗಳ ಮನೆಯಲ್ಲೇ ಮಾಂಸದ ಅಡುಗೆ ಇರುತ್ತದೆ. ಅಂತೆಯೇ ಸಸ್ಯಹಾರಿಗಳ ಮನೆಯಲ್ಲಿ ಪಾಯಸ, ಸಿಹಿ ಅಡುಗೆ ಮಾಡುವುದು ವಾಡಿಕೆ.
ಯುಗಾದಿಯ ಮಾರನೇ ದಿನವನ್ನು ಹೊಸ ವರ್ಷದ ಸಂಭ್ರಮವಾಗಿ ಆಚರಿಸಲಾಗುವುದು. ಕಷ್ಟಗಳನ್ನು ಮರೆಯುವುದಕ್ಕಾಗಿ ಹಿಂದೆಲ್ಲಾ ಅನೇಕ ಮನರಂಜನೆಯ ಆಟಗಳನ್ನು ಆಡುತ್ತಿದ್ದರು. ಚೌಹಾಬಾರ, ಅಳಿಗುಳಿಮನೆ, ಗಟ್ಟೆಮನೆ, ತೂಗುಯ್ಯಾಲೆ ಮೊದಲಾದ ಆಟಗಳಿದ್ದವು. ತದನಂತರ ಇಸ್ಟೀಟ್ ಆಟ ಬಂತು. ಆ ದಿನ ವರ್ಷದ ತೊಡಕು ಅಂದರೆ, ಯಾವುದೇ ಅಡ್ಡಿ-ಆತಂಕ, ಕಷ್ಟಗಳು ಬಾರದಿರಲೆಂದು ಹೈರೈಸುವ ಶುಭದಿನವಾಗಿ ಆಚರಿಸುವ ಪದ್ಧತಿ ಇದೆ. ಇದನ್ನೂ ಓದಿ: ಯುಗಾದಿ ಸಂಭ್ರಮ – ಬ್ಯಾಚುಲರ್ ಹುಡುಗರು, ದೂರವೇ ಉಳಿದವರ ಸಡಗರ
ಮಾಂಸಾಹಾರಿಗಳಿಗಂತೂ ಈ ದಿನ ಹೆಚ್ಚು ಪ್ರಿಯ. ಅಂದು ಎಲ್ಲೆಡೆ ಚಿಕನ್, ಮಟನ್, ಫಿಶ್ ಅಂಗಡಿಗಳಲ್ಲಿ ಜನ ತುಂಬಿರುತ್ತಾರೆ. ಕೆಜಿ ಕೆಜಿಗಟ್ಟಲೇ ಖರೀದಿಸಿ, ಮಾಂಸಾಹಾರವೇ ಪ್ರಧಾನವಾದ ಅಡುಗೆಯನ್ನು ಮಾಡುತ್ತಾರೆ. ಕುಟುಂಬಸ್ಥರೆಲ್ಲ ಸೇರಿ ಹಬ್ಬದೂಟ ಮಾಡುತ್ತಾರೆ. ಕೆಲವರು ನೆಂಟರಿಷ್ಟರನ್ನೂ ಆಹ್ವಾನಿಸಿ, ಖಾರದೂಟದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೊಸ ತೊಡಕಿನ ದಿನ ಚಿಕನ್, ಮಟನ್ ಬೆಲೆ ಹೆಚ್ಚಿರುತ್ತದೆ. ಹೊರ ರಾಜ್ಯಗಳಿಂದಲೂ ವಿಶೇಷ ತಳಿಯ ಕುರಿ, ಮೇಕೆಗಳನ್ನು ತರಿಸಿ ಮಾರುವುದುಂಟು. ಹಿಂದೆಯೆಲ್ಲ ಕೆಜಿ ಲೆಕ್ಕ ಇರಲಿಲ್ಲ. ಗುಡ್ಡೆ ಲೆಕ್ಕದಲ್ಲಿ (ಗುಡ್ಡೆಮಾಂಸ) ಮಾರಾಟವಾಗುತ್ತಿತ್ತು. ಈಗಲೂ ಆ ಪರಿಪಾಠ ಇದೆ.
ಹೊಸ ತೊಡಕಿನ (Hosatodaku) ದಿನದಂದು ಮಾಂಸದ ಜೊತೆಗೆ ಮದ್ಯದ ಕಾರುಬಾರು ಕೂಡ ಇರುತ್ತದೆ. ಎಣ್ಣೆ ಜೊತೆಗೆ ಚಿಕನ್, ಮಟನ್ ಟೇಸ್ಟ್ ಬಲು ಸೂಪರ್ ಎನ್ನುವವರಿಗೆ ಈ ದಿನ ವಿಶೇಷ. ಅಂದು ಮದ್ಯ ಮಾರಾಟ ಕೂಡ ಬಲು ಜೋರಾಗಿಯೇ ಇರುತ್ತದೆ. ಕುಡಿದು ಗಲಾಟೆ ಮಾಡುವುದು, ಹಣವಿಟ್ಟು ಇಸ್ಟೀಪ್ ಆಡುವುದು ಎಲ್ಲಾ ಇರುತ್ತದೆ. ಹೀಗೆ ಖುಷಿ-ಖುಷಿಯಾಗಿ ಆಚರಿಸಿದರೆ ಹೊಸತೊಡಕು ತುಂಬಾ ಮಜವಾಗಿರುತ್ತದೆ ಎಂಬುದು ಹಲವರ ಭಾವನೆ. ಇದನ್ನೂ ಓದಿ: ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ
ಈ ದಿನ ವರ್ಷದ ತೊಡಕ್ಕೆಲ್ಲ ನಿವಾರಣೆಯಾಗಿ ಎಲ್ಲರಿಗೂ ಸುಖಸಮೃದ್ಧಿ ಬರಲಿ ಎಂಬುದೇ ಹೊಸತೊಡಕು ಆಚರಣೆಯ ವಿಶೇಷತೆ. ಈ ಬಾರಿ ಯುಗಾದಿ ಮಾರನೇ ದಿನ ಸೋಮವಾರ ಬಿದ್ದಿದೆ. ಸೋಮವಾರದಂದು ಬಹುತೇಕ ಕಡೆಗಳಲ್ಲಿ ಜನರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ಹೀಗಾಗಿ, ಮಂಗಳವಾರ ಹೊಸ ತೊಡಕು ಮಾಡುತ್ತಾರೆ. ಇದನ್ನೂ ಓದಿ: ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆಲ್ಲಾ ಆಚರಿಸುತ್ತಾರೆ?