ಚಾಮರಾಜನಗರ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಬೆಳಗ್ಗೆ 8 ರಿಂದ 9 ರವರೆಗಿನ ಶುಭ ಲಗ್ನದಲ್ಲಿ ಯುಗಾದಿ ರಥೋತ್ಸವ ನಡೆಯಿತು.
ಯುಗಾದಿ ರಥೋತ್ಸವಕ್ಕೆ ರಾಜ್ಯ ಅಷ್ಟೇ ಅಲ್ಲದೇ, ತಮಿಳುನಾಡನಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಉತ್ಸವ ಮೂರ್ತಿ ಇರಿಸಿ ಬೂದು ಕುಂಬಳಕಾಯಿ ದೃಷ್ಟಿ ತೆಗೆದು ಮಹಾಮಂಗಳಾರತಿ ಹಾಗೂ ಬೇಡಗಂಪಣ ಸಮುದಾಯದ ಹೆಣ್ಣುಮಕ್ಕಳಿಂದ ಬೆಲ್ಲದ ಆರತಿ ಬೆಳಗಿದ ಬಳಿಕವಷ್ಟೇ ಮಹಾ ರಥೋತ್ಸವ ಆರಂಭಗೊಂಡಿತು.
ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿ ದ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರು ಎಳೆಯಲಾಯಿತು. ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವು ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ಭಕ್ತರು ತೇರಿಗೆ ಹಣ್ಣು, ದವಸ ಧಾನ್ಯಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು.
ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಜಾತ್ರೆಗೆ ಸಹಸ್ರಾರು ಮಂದಿ ಭಕ್ತರು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಪ್ರಾಧಿಕಾರದ ವತಿಯಿಂದ ನಿರಂತರ ಪ್ರಸಾದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಸೇರಿ ಮೂಲಸೌಕರ್ಯ ಕಲ್ಪಿಸಿತ್ತು. ಜೊತೆಗೆ, ಯಾವುದೇ ಅಹಿತಕರ ಘಟನೆ ಆಗದಂತೆ ಜಿಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು.