ದಾವಣಗೆರೆ: ಯುಗಾದಿ ಹಬ್ಬದ ವೇಳೆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ನಿತ್ಯ ಕಾಯಕ ಹಬ್ಬಕ್ಕೆ ಶಾವಿಗೆ ರೆಡಿ ಮಾಡೋದು, ಆದರೆ ಈಗ ಕಾಲ ಬದಲಾಗಿದೆ. ದಿನಗಟ್ಟಲೆ ಕೂತು ಮನೆಯಲ್ಲಿ ಯಾರು ಶಾವಿಗೆ ತಯಾರು ಮಾಡಲ್ಲ. ಆದ್ರೆ ದಾವಣಗೆರೆಯಲ್ಲೊಂದು ಕುಟುಂಬ ಶಾವಿಗೆ ತಯಾರು ಮಾಡಿ ಯುಗಾದಿ ಹಬ್ಬಕ್ಕೆ ನಗರದ ಜನತೆಗೆ ಪೂರೈಕೆ ಮಾಡುತ್ತದೆ.
ನಗರದ ಕೆಟಿಜೆ ನಗರದಲ್ಲಿ ಶಾವಿಗೆ ತಯಾರು ಮಾಡುವ ದೇವಿ ಹೋಂ ಇಂಡಸ್ಟ್ರೀಸ್ ಎಂಬ ಸಣ್ಣ ಪ್ರಮಾಣದ ಉದ್ದಿಮೆ ಇದೆ. ಸುಮಾರು 50 ವರ್ಷದಿಂದ ಯುಗಾದಿ ಹಬ್ಬಕ್ಕೆ ಮನೆಯಲ್ಲೆ ಶಾವಿಗೆ ರಡಿ ಮಾಡಿ ಇಡೀ ರಾಜ್ಯ ಹಾಗೂ ಹೊರ ರಾಜ್ಯಕ್ಕೆ ಅದನ್ನ ಉಣ ಬಡಿಸುತ್ತಾರೆ. ಇಲ್ಲಿಯ ಶಾವಿಗೆ ಗುಣಮಟ್ಟದ್ದಾಗಿದ್ದು, ಈ ಶಾವಿಗೆಯನ್ನು ರಾಜ್ಯ ಸೇರಿದಂತೆ ಹೊರ ರಾಜ್ಯದವರು ತರಿಸಿಕೊಂಡು ಹಬ್ಬ ಆಚರಣೆ ಮಾಡಿ ಶಾವಿಗೆ ಸವಿಯುತ್ತಾರೆ.
ಈ ಹಿಂದೆ ಮನೆಯಲ್ಲೆಲ್ಲ ಯುಗಾದಿ ಹಬ್ಬ ಬಂತಂದ್ರೆ ನಾಲ್ಕೈದು ಮಹಿಳೆಯರು ಕುಳಿತು ದಿನಗಟ್ಟಲೇ ಶಾವಿಗೆ ತಯಾರು ಮಾಡಿ, ಅದನ್ನ ಹಬ್ಬದಂದು ಸವಿಯುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಶಾವಿಗೆ ರೆಡಿ ಮಾಡುವುದನ್ನ ಬಿಟ್ಟಿದ್ದಾರೆ. ಈಗ ಏನಿದ್ರೂ ರೆಡಿಮೇಡ್ ಶಾವಿಗೆ ಖರೀದಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಯುಗಾದಿ ಹಬ್ಬ ಸಮೀಪವಾಗುತ್ತಿದ್ದಂತೆ ಜನರು ದೇವಿ ಹೋಂ ಇಂಡಸ್ಟ್ರೀಸ್ ಶಾವಿಗೆ ಖರೀದಿ ಮಾಡಲು ಮುಗಿಬೀಳುತ್ತಾರೆ. ಒಂದು ಬಾರಿ ಇಲ್ಲಿನ ಶಾವಿಗೆಯ ರುಚಿ ಕಂಡ್ರೆ ಪ್ರತಿ ವರ್ಷವೂ ಗ್ರಾಹಕರು ಇಲ್ಲಿಗೆ ಫಿಕ್ಸ್ ಆಗುತ್ತಾರೆ. ಜೊತೆಗೆ ಯಾವುದೇ ಸಮಾರಂಭಗಳು, ಹಬ್ಬ ಹರಿದಿನಗಳು ಇದ್ರು ಬೇರೆ ಕಡೆಗೆ ಹೋಗದೆ, ದೇವಿ ಹೋಂ ಇಂಡಸ್ಟ್ರೀಸ್ ಬಂದು ಖರೀದಿ ಮಾಡುತ್ತೇವೆ ಎಂದು ಗ್ರಾಹಕರಾದ ಶಿವಾನಂದ್ ಹೇಳುತ್ತಾರೆ.