ಚೈತ್ರಮಾಸದ ಮೊದಲ ದಿನವೆಂದರೆ ಹಾಗೇ ಹೊಸ ಮಾಸದ ಘಮಲು, ಹೊಸ ಭರವಸೆಯ ಕನಸು. ಹಳೆಯದೆಲ್ಲವ ಅಳಿಸಿ, ಹೊಸತಾಗುವ ಈ ಹಬ್ಬ ವರ್ಷಾರಂಭದ ಸಂಕೇತ.
ಮಾಗೀಯ ಕಾಲ ಮುಗಿದು ಬೇಸಿಗೆ ಬರುತ್ತಿದ್ದಂತೆ ಪ್ರಕೃತಿ ಮೈದುಂಬಿಕೊಳ್ಳುವುದರೊಂದಿಗೆ, ಹಬ್ಬ ಬಂದೇಬಿಡುತ್ತೆ. ವಸಂತಮಾಸ ಬರಲು ಸೃಷ್ಟಿಯು ಚಿಗುರಿ ಹೂವು ಮಿಡಿಗಳನ್ನು ಹೊತ್ತು ನಿಲ್ಲುತ್ತದೆ. ದುಂಬಿಗಳು ಝೇಂಕರಿಸಿ ಮೊಗ್ಗು, ಹೂವುಗಳೊಡನೆ ನರ್ತಿಸುತ್ತದೆ. ಕೋಗಿಲೆಯು ಚಿಗುರು ಮೆದ್ದು ಕಂಠ ಪರಿಶುದ್ಧವಾಗಿ ಹಾಡುತ್ತದೆ. ಸಕಲ ಸೃಷ್ಟಿಯೇ ಪ್ರಾಯ ತುಂಬಿ ಕುಲು ಕುಲು ನಗುತ್ತದೆ. ಯುಗಾದಿಗೆ ಆಮಿಸುವ ಸಂಕೇತ ಇದು. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ
ಗ್ರಾಮೀಣ ಕ್ರೀಡೆಗಳ ಗಮ್ಮತ್ತು
ಯುಗಾದಿ ಸಂದರ್ಭದಲ್ಲಿ ಹಲವು ಆಟಗಳ ಮೂಲಕ ಜನಪದರು ತಮ್ಮ ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಹೊಲದಲ್ಲಿ ದುಡಿದು ರಾಶಿ ಮಾಡಿ ಹೊಸ ಬೆಳೆಯನ್ನು ಮನೆ ತುಂಬಿಸಿಕೊಂಡ ನಮ್ಮ ರೈತಾಪಿ ಜನರು ಯುಗಾದಿ ಬರುವ ಹೊತ್ತಿಗೆ ನಿರಾಳವಾಗಿರುತ್ತಾರೆ. ಹಬ್ಬದ ಸಂದರ್ಭದಲ್ಲಿ ಹಲವಾರು ಜನಪದ ಆಟಗಳು ಗರಿಗೆದರುತ್ತವೆ. ಇದನ್ನೂ ಓದಿ: ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ
ಲಗೋರಿ, ಕಬಡ್ಡಿ, ಚೌಕಾಬಾರ, ಬಟ್ಟೆ ಚಂಡಾಟ, ಚಿನ್ನಿದಾಂಡು, ಬುಗರಿ, ಕುಂಟೆಬಿಲ್ಲೆ, ಸರಗೆರಿ, ಅದೆಷ್ಟೋ ದೂರದಲ್ಲಿ ತೆಂಗಿನ ಕಾಯಿ ಕಟ್ಟಿ ಕಲ್ಲಿನಿಂದ ಹೊಡೆಯುವುದು, ಗೋಲಿ ಆಟ, ಇತ್ತೀಚಿನ ದಿನಗಳಲ್ಲಿ ಇಸ್ಪೀಟು ಹೀಗೆ ಹತ್ತಾರು ಆಟಗಳನ್ನು ಸಣ್ಣವರು ದೊಡ್ಡವರೆನ್ನದೇ ಆಡುತ್ತಾರೆ. ಆಟದ ಸೋಲು ಗೆಲುವುಗಳು ಬರುವ ವರ್ಷದ ಸೋಲು ಗೆಲುವುಗಳನ್ನು ನಿರ್ಣಯಿಸುತ್ತದೆಂಬ ನಂಬಿಕೆ ಜನಪದರಲ್ಲಿದೆ. ಇದನ್ನೂ ಓದಿ: ಯುಗಾದಿ ಸ್ಪೆಷಲ್; ಆರೋಗ್ಯಕರ ಪಚಡಿ ರೆಸಿಪಿ!
ಹೊನ್ನೆತ್ತು
ಕೆಲವು ಹಳ್ಳಿಗಳಲ್ಲಿ ಎತ್ತುಗಳನ್ನು ಓಡಿಸುವ ಆಟವಾಡುತ್ತಾರೆ. ಚೆನ್ನಾಗಿ ಮೇಯಿಸಿದ ಒಂದು ಎತ್ತಿನ ಕೊಂಬಿಗೆ ಐದಣವನ್ನು ಬಟ್ಟೆಯಿಂದ ಕಟ್ಟಿ ಅದರ ಹಗ್ಗ ಮೂಗುದಾರ ಬಿಚ್ಚಿ ರಂಗದ ಮುಂದೆ ನಿಲ್ಲಿಸಲಾಗುತ್ತದೆ. ನಂತರ ಅದನ್ನು ಜನರ ಸಮ್ಮುಖದಲ್ಲಿ ಕೆಣಕಿ ಓಡಿಸುತ್ತಾರೆ. ಹೀಗೆ ಓಡುವ ಎತ್ತನ್ನು ಕಟ್ಟುಮಸ್ತಾದ ಯುವಕರು ಓಡಾಡಿಸಿಕೊಂಡು ಹಿಡಿದು ನಿಲ್ಲಿಸಿದ್ರೆ, ಕಟ್ಟಿದ ಐದಣ ಸಿಗೋದಲ್ಲದೇ ಊರಲ್ಲಿ ಅವರ ಪ್ರತಿಷ್ಠೆಯು ಹೆಚ್ಚಾಗುತ್ತದೆ. ಈ ಆಟಕ್ಕೆ ಹೊನ್ನೆತ್ತು ಎನ್ನುತ್ತಾರೆ, ಜಲ್ಲಿಕಟ್ಟು ಆಟಕ್ಕೆ ಸಮ.
ಹೀಗೆ ಪ್ರತಿ ವರ್ಷ ಹಿಂದೂಗಳ ಹೊಸವರ್ಷವಾದ ಈ ಹಬ್ಬದಲ್ಲಿ ಪ್ರಕೃತಿ ಚಿಗುರಿನೊಂದಿಗೆ ಜನ ಹೊಸ ಹೊಸ ಸಂಕಲ್ಪಗಳನ್ನು ಕಟ್ಟಿಕೊಳ್ಳುವುದು, ಹೊಸ ಜೀವನಕ್ಕೆ ಮುನ್ನುಡಿ ಬರೆಯುವುದು ಈ ಹಬ್ಬದ ಉದ್ದೇಶವೆಂದು ಜನ ನಂಬುತ್ತಾರೆ. ಇಂತಹ ನಂಬಿಕೆ ಜನಪದ ಕ್ರೀಡೆಗಳಲ್ಲಿ ಇಂದಿಗೂ ಮಿಳಿತಗೊಂಡಿದೆ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?