ಬೆಂಗಳೂರು: ಯುಗಾದಿ (Ugadi festival), ಹೊಸತೊಡಕು, ರಂಜಾನ್ ಹೀಗೆ ಸಾಲು ಸಾಲು ಹಬ್ಬದ ಸಂಭ್ರಮ ಊರೆಲ್ಲ ತುಂಬಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲೂ ಇದು ವ್ಯಾಪಿಸತೊಡಗಿದ್ದು, ಹೂವು, ಹಣ್ಣು ಹಂಪಲು ದರ ಗಗನಮುಖಿಯಾಗಿದೆ. ಅತ್ತ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜನ ಖರೀದಿ ಬರಾಟೆ ಜೋರಾಗಿ ನಡೆಸುತ್ತಿದ್ದಾರೆ.
ಬೆಲೆ ಏರಿಕೆ ನಡುವೆಯೂ ಗ್ರಾಹಕರು ಮಾರುಕಟ್ಟೆಗೆ ದಾಂಗುಡಿಯಿಟ್ಟು ಖರೀದಿ ಬರಾಟೆ ನಡೆಸಿದ್ದಾರೆ. ಕೆಲವರು ಅಲ್ಲಲ್ಲಿ ಚೌಕಾಸಿ ಮಾಡಿ ರೇಟು ಗಿಟ್ಟಿಸಿಕೊಂಡು ಹೇಗೂ ಹಬ್ಬದ ಸಾಮಗ್ರಿ ಖರೀದಿಸುತ್ತಿದ್ದಾರೆ. ಶನಿವಾರ ರಾತ್ರಿಯಿಂದಲೂ ಹಬ್ಬದ ಖರೀದಿ ಜೋರಾಗಿದ್ದು, ವ್ಯಾಪಾರಿಗಳೂ ಹರ್ಷಗೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ
ಬೆಂಗಳೂರು (Bengaluru) ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿಯೂ ಮಾವು ಮತ್ತು ಬೇವಿನ ಸೊಪ್ಪಿನ ರಾಶಿ ಇರಿಸಲಾಗಿದ್ದು, ಜನರು ಸಂಭ್ರಮದಿಂದ ಖರೀದಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ವಿವಿಧೆಡೆ ಮಾರುಕಟ್ಟೆಯಲ್ಲಿ ಜನಜಂಗುಳಿ ಇನ್ನೂ ಮುಂದುವರಿದಿದೆ. ಜನರು ಹಬ್ಬಕ್ಕೆ ಬೇಕಾದ ಮಾವು ಮತ್ತು ಬೇವಿನ ಸೊಪ್ಪು, ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ನಗರದ ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳಲ್ಲೂ ಖರೀದಿ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಎರಡು-ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ಮಲ್ಲಿಗೆ, ಗುಲಾಬಿ ಸೇರಿದಂತೆ ಕೆಲ ಹೂವಿನ ದರಗಳು ಕೊಂಚ ಏರಿಕೆಯಾಗಿವೆ. ಅಲ್ಲದೇ ಈ ಬಾರಿ ಕನಕಾಂಬರ ಹೂವಿನ ಬೆಳೆ ಚೆನ್ನಾಗಿ ಬಂದಿದ್ದು, ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿದೆ. ಇದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಬೆಲೆ ಸ್ವಲ್ಪ ಕಡಿಮೆಯಿದೆ ಅನ್ನುತ್ತಾರೆ ವ್ಯಾಪಾರಿಗಳು. ಇದನ್ನೂ ಓದಿ: ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ – 4 ವರ್ಷಗಳಲ್ಲಿ ಸಾಲು ಸಾಲು ಅಪಘಾತ
ನಗರವಾಸಿಗಳಲ್ಲಿ ಹಲವರು ಊರುಗಳಿಗೆ ತೆರಳಿದ್ದಾರೆ. ತಿಂಗಳಾಂತ್ಯಕ್ಕೆ ಹಬ್ಬ ಬಂದಿದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಕಡಿಮೆ ಆಗಿದೆ. ಮಲ್ಲಿಗೆ ಮೊಗ್ಗು, ಗುಲಾಬಿ ದರವು ಕಳೆದ ಮೂರು ದಿನಗಳಿಂದ ಏರಿಕೆ ಕಂಡಿದ್ದು, ಉಳಿದ ಹೂವುಗಳ ದರವು ಈ ಬಾರಿ ಹೆಚ್ಚಳವಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ