– ನಾಲ್ಕು ದಿನಗಳಿಂದ ಶ್ರಮದಾನ
ಉಡುಪಿ: ನಗರದ ಜೀವನಾಡಿ ಸ್ವರ್ಣಾ ನದಿ ಬತ್ತಿ ಹೋಗಿದೆ. ಹೊಂಡ ಗುಂಡಿಯಿಂದ ನೀರನ್ನು ಎತ್ತಿ ಬಜೆ ಡ್ಯಾಮಿಗೆ ಹರಿಸಲಾಗುತ್ತಿದೆ. ಏಳು ದಿನಗಳಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ಕಡಿತವಾಗಿದೆ. ಸಮಸ್ಯೆ ಅರಿತ ಉಡುಪಿ ಶಾಸಕ ರಘುಪತಿ ಭಟ್ ಹಾರೆ ಪಿಕ್ಕಾಸಿ ಹಿಡಿದು ಸ್ವರ್ಣಾ ನದಿಗಿಳಿದು ನೀರು ಪೊರೈಸುವ ಹಠಕ್ಕೆ ಬಿದ್ದಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳು ಬರಕ್ಕೆ ತುತ್ತಾಗಿದೆ. ಉಡುಪಿ ಜಿಲ್ಲೆಯನ್ನು ಭಾಗಶಃ ಬರದ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಉಡುಪಿ ನಗರದ ಜೀವನಾಡಿ ಸ್ವರ್ಣಾ ನದಿ ಬತ್ತಿದೆ. ಏಳು ದಿನದಿಂದ ನಗರಕ್ಕೆ ಕುಡಿಯುವ ನೀರಿನ ಸರಬರಾಜು ನಿಂತಿದೆ. ಸದಾ ತುಂಬಿ ಹರಿಯುತ್ತಿದ್ದ ಸ್ವರ್ಣ ನದಿ ಮೈದಾನದಂತೆ ಕಾಣುತ್ತಿದೆ. ನದಿ ಮತ್ತು ಡ್ಯಾಂ ನಲ್ಲಿ ಭಾರೀ ಗಾತ್ರದ ಹೂಳು ತುಂಬಿದೆ. ಹಿಂಗಾರು ಮಳೆ ಕಡಿಮೆ ಬಿದ್ದಿದ್ದರಿಂದ ಜಿಲ್ಲೆಯಲ್ಲಿ ಭಾಗಶಃ ಬರ ಬಂದಿದೆ.
Advertisement
Advertisement
ಕುಡಿಯುವ ನೀರು ಕೊಡುವಂತೆ ಸಾರ್ವಜನಿಕರು ಉಡುಪಿ ಶಾಸಕ ಹಾಗೂ ನಗರಸಭೆ ಸದಸ್ಯರ ಬೆನ್ನು ಬಿದ್ದಿದ್ದಾರೆ. ಸಮಸ್ಯೆ ಬಿಗಡಾಯಿಸಿರುವುದನ್ನು ಅರಿತ ಉಡುಪಿ ಶಾಸಕ ರಘುಪತಿ ಭಟ್, ನೂರಾರು ಜನರೊಂದಿಗೆ ಹಾರೆ, ಪಿಕ್ಕಾಸಿ ಹಿಡಿದು ಸ್ವತಃ ತಾವೇ ನದಿಗಿಳಿದಿದ್ದಾರೆ. ನಾಲ್ಕೈದು ಹೊಂಡದಿಂದ ನೀರನ್ನು ಡ್ಯಾಂಗೆ ಪಂಪ್ ಮಾಡಲಾಗುತ್ತಿದ್ದು, ಮರಳು ಹಾಗೂ ಬಂಡೆಯನ್ನು ಬಿಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ನಗರಸಭೆ ಸದಸ್ಯರು, ಸಾರ್ವಜನಿಕರು ನಾಲ್ಕು ದಿನಗಳಿಂದ ಶ್ರಮದಾನದಲ್ಲಿ ತೊಡಗಿದ್ದು ನೀರು ಬಜೆ ಡ್ಯಾಂ ಕಡೆ ಹೊರಟಿದೆ.
Advertisement
ಪಬ್ಲಿಕ್ ಟಿವಿ ಜೊತೆ ಶಾಸಕ ರಘುಪತಿ ಭಟ್ ಮಾತನಾಡಿ, ನೀರಿನ ಹರಿವು ಕಮ್ಮಿ ಇರುವಾಗಲೇ ಪಂಪಿಂಗ್ ಮಾಡಬೇಕಿತ್ತು. ಚುನಾವಣೆಯ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದದ್ದರಿಂದ ಸಭೆ ಮಾಡಲಾಗಿಲ್ಲ. ಅಧಿಕಾರಿಗಳು ಈ ಕಡೆ ಗಮನ ಕೊಡದಿರುವುದರಿಂದ ಕೃತಕ ಬರ ಎದುರಾಗಿದೆ ಎಂದು ಹೇಳಿದರು.
Advertisement
ನೀರಿನ ಹರಿವು ಕಡಿಮೆಯಾಗುವ ಸಂದರ್ಭ ಹೊಂಡಗಳಿಂದ ನೀರನ್ನು ಲಿಫ್ಟ್ ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಡ್ಯಾಂ ನಲ್ಲಿ ಮತ್ತು ನದಿ ಹರಿಯುವ ಜಾಗದಲ್ಲಿ ಸುಮಾರು ಮೂರು ಲಕ್ಷ ಟನ್ ನಷ್ಟು ಮರಳು, ಮಣ್ಣು, ಕಸ ತುಂಬಿಕೊಂಡಿದೆ. ಜಿಲ್ಲಾಧಿಕಾರಿಗಳು, ಉಡುಪಿ ನಗರಸಭೆ ಹೂಳೆತ್ತುವ ಕೆಲಸ ಮಾಡಿದ್ರೆ ನೀರಿನ ಸಂಗ್ರಹ ಜಾಸ್ತಿಯಾಗುತಿತ್ತು. ಬೇಸಿಗೆ ಬಂದಾಗ ಮಾತ್ರ ಕಾರ್ಯಪ್ರವೃತ್ತರಾಗುವವರು ಆಮೇಲೆ ಈ ಬಗ್ಗೆ ಚಿಂತೆಯೇ ಬಿಟ್ಟು ಬಿಡುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಅಂದರು.
ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ 4,000 ಮಿಲಿಮೀಟರ್ ಮಳೆ ಬಿಳುತ್ತದೆ. ರಾಜ್ಯದ ಅತೀ ಹೆಚ್ವು ಮಳೆ ಬೀಳುವ ಜಿಲ್ಲೆಯಲ್ಲೇ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರ ಬರೋದು ನಾಚಿಕೆಗೇಡಿನ ಸಂಗತಿ. ನೀರನ್ನು ಸ್ಟೋರೇಜ್ ಮಾಡುವಲ್ಲಿ, ಸೂಕ್ತ ಡ್ಯಾಂ ನಿರ್ಮಾಣ ಮಾಡೋದ್ರಲ್ಲಿ, ಡ್ಯಾಂ ಹೂಳೆತ್ತುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸೋತಿರುವುದರಿಂದ ಜನ ಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.