ಉಡುಪಿ: ದೇಶದಲ್ಲಿ ಕೊರೊನಾ ಎಮರ್ಜೆನ್ಸಿ ಘೋಷಣೆಯಾದ ಸಂದರ್ಭದಿಂದ ಜನ ಇದ್ದಲ್ಲಿಯೇ ಲಾಕ್ ಆಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸುಮಾರು ಐದು ಸಾವಿರ ಜನ ವಲಸೆ ಕಾರ್ಮಿಕರು ಅತಂತ್ರ ಆಗಿದ್ದಾರೆ. ಲಾಕ್‍ಡೌನ್ ಆರಂಭವಾದ ದಿನದಿಂದ ಉಡುಪಿಯಲ್ಲಿ ಅನ್ನದಾಸೋಹ ನಡೆಯುತ್ತಿದೆ.
ಹೊರ ಜಿಲ್ಲೆ ಹೊರ ರಾಜ್ಯದ ಕಾರ್ಮಿಕರು ನಿರಾಶ್ರಿತ ಕೇಂದ್ರ, ಬಾಡಿಗೆ ಮನೆ, ಟೆಂಟ್ ಗಳಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕ ಹೋರಾಟಗಾರರು, ಸಂಘ ಸಂಸ್ಥೆಗಳು ಈಗಾಗಲೇ ಊಟೋಪಚಾರದ ವ್ಯವಸ್ಥೆಯನ್ನು ಉಡುಪಿ ಜಿಲ್ಲೆಯಾದ್ಯಂತ ಮಾಡುತ್ತಿವೆ. ಈ ನಡುವೆ ಉಡುಪಿಯಲ್ಲಿ ಮಧ್ಯಾಹ್ನದ ಊಟದ ಜೊತೆ ರಾತ್ರಿ ಊಟವನ್ನೂ ಆರಂಭಿಸಲಾಗಿದೆ.
Advertisement
Advertisement
ಉಡುಪಿ ನಗರದಲ್ಲಿ ಮಧ್ಯಾಹ್ನ ರಾತ್ರಿ ಸುಮಾರು ಏಳು ಸಾವಿರ ಜನಕ್ಕೆ ಊಟೋಪಚಾರದ ವ್ಯವಸ್ಥೆ ನಡೆಯುತ್ತಿದೆ. ಕಡಿಯಾಳಿ ಗಣೇಶೋತ್ಸವ ಸಮಿತಿ ಮತ್ತು ದಾನಿಗಳು ಮಧ್ಯಾಹ್ನ ಊಟ ನೀಡಿದರೆ, ರಾತ್ರಿ ಊಟ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ವ್ಯವಸ್ಥೆ ಶುರು ಮಾಡಿದೆ. ರಾತ್ರಿ 5,300 ಜನರಿಗೆ ಲಾಕ್‍ಡೌನ್ ಮುಗಿಯುವವರೆಗೆ ಉಚಿತ ಊಟ ನೀಡಲು ಸಮಿತಿ ನಿರ್ಧರಿಸಿದೆ. ಉಡುಪಿ ಫಾಸ್ಟ್ ಕೇಬಲ್ ನೆಟ್ ವರ್ಕ್ ಮಾಲೀಕ ಗುರುರಾಜ್ ಅಮೀನ್ ಈ ದಿನದ ಊಟದ ಪ್ರಾಯೋಜಕತ್ವ ವಹಿಸಿದ್ದರು.
Advertisement
Advertisement
ಉಡುಪಿ ಶಾಸಕ ರಘುಪತಿ ಭಟ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ ಒಟ್ಟು ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ, ನಮ್ಮ ಶಾಸಕರು ನೀಡಿದ ನಿರ್ದೇಶನದ ಮೇಲೆ ಊಟ ವಿತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ದೇವಸ್ಥಾನದ ಬ್ರಹ್ಮಕಲಶಕ್ಕೆ ಸಂಪತ್ತು ಕ್ರೋಢಿಕರಣ ಮಾಡಿದ್ದೆವು. ಲಾಕ್‍ಡೌನ್ ಇರೋದರಿಂದ ಆ ಕೆಲಸ ಆಗುತ್ತಿಲ್ಲ. ಭಗವಂತನೇ ಜನ ಸೇವೆ ಮಾಡಿಸುತ್ತಿದ್ದಾನೆ ಎಂದು ನಂಬಿದ್ದೇವೆ. ನಮ್ಮ ಕಾರ್ಯಕರ್ತರ ತಂಡ ದಿನವಿಡೀ ಕೆಲಸ ಮಾಡುತ್ತಿದ್ದಾರೆ. ಇದೂ ದೇವರ ಸೇವೆಯಂತೆ ನಿಷ್ಠೆಯಿಂದ ಮಾಡುತ್ತಿದ್ದೇವೆ ಎಂದು ಹೇಳಿದರು.