ಉಡುಪಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳಿಬ್ಬರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಇಬ್ಬರು ಹಾರಿ ರಸ್ತೆ ಹೊರಗೆ ಬಿದ್ದಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಸ್ಥಳದಲ್ಲೇ ಒಬ್ಬರು ಮೃತ ಪಟ್ಟಿದ್ದರೆ, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಪ್ರಭಾಕರ (27) ಎಂಬವರು ಸ್ಥಳದಲ್ಲೇ ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸುರೇಶ (50) ಎಂದು ಗುರುತಿಸಲಾಗಿದೆ. ತಡರಾತ್ರಿ ಯಕ್ಷಗಾನ ನೋಡಿ ರಸ್ತೆಯ ಒಂದು ಬದಿಯಿಂದ ನಡೆದು ಹೋಗುತ್ತಿದ್ದ ವೇಳೆ ಅಪರಿಚಿತ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡ ಸುರೇಶ ಅವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವಾದ ನಂತರ ಲಾರಿ ಚಾಲಕ ಅವರು ಬದುಕಿದ್ದರಾ ಅಥವಾ ಸತ್ತಿದ್ದರಾ ಎಂಬುದನ್ನು ಸಹ ನೋಡಿಲ್ಲ. ಘಟನೆ ಮುಂಜಾನೆ ನಡೆದರು ಬೆಳಗಾಗುವವರೆಗೂ ಯಾರು ಇದನ್ನು ಗಮಿಸಿಲ್ಲ. ನಂತರ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯ ಹಾಲು ಮಾರುವ ಯುವಕ ಗಮನಿಸಿ ಸಾರ್ವಜನಿಕರ ನೆರವಿನಿಂದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.
ಪ್ರಸ್ತುತ ಅಪಘಾತಕ್ಕೆ ಕಾರಣವಾದ ವಾಹನದ ಮಾಹಿತಿ ಲಭಿಸಿಲ್ಲ. ಆದರೆ ಅಪಘಾತದ ವಿಡಿಯೋ ಮಾತ್ರ ನೋಡಿದವರನ್ನು ತಲ್ಲಣಗೊಳಿಸುತ್ತಿದೆ. ಘಟನೆ ಕುರಿತು ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅಪಘಾತ ನಡೆದ ಮಾರ್ಗದಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
https://www.youtube.com/watch?v=jtjc1FagGgs