ಉಡುಪಿ: ಮೂರು ವರ್ಷಗಳ ಬಳಿಕ ವಿದೇಶದಿಂದ ಊರಿಗೆ ಮರಳಿದ ಯುವಕ ತನ್ನ ತಾಯಿಗೆ ಸರ್ಪ್ರೈಸ್ ನೀಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಉಡುಪಿ (Udupi) ಜಿಲ್ಲೆ ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮಿತ್ರರಿಗೆ ಸರ್ಪ್ರೈಸ್ ನೀಡುವ ನಿಟ್ಟಿನಿಂದ ತಾವು ಬರುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಅಂತೆಯೇ ಮನೆಗೆ ಮರಳಿದಾಗ ಮನೆಯವರೆಲ್ಲ ರೋಹಿತ್ ನನ್ನು ಎದುರುಗೊಂಡರು. ಆದರೆ ತಾಯಿ ಮಾತ್ರ ಮನೆಯಲ್ಲಿ ಇರದಿರುವುದನ್ನು ಕಂಡು ಬೇಸರಗೊಂಡಿದ್ದ ರೋಹಿತ್, ನೇರವಾಗಿ ಗಂಗೊಳ್ಳಿ ಬಂದರು ಬಳಿ ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿದ್ದಾರೆ.
ತಾಯಿ ಸುಮಿತ್ರಾ ಮೀನು ಮಾರುತ್ತಿದ್ದಲ್ಲಿಗೆ ತೆರಳಿದ್ದ ರೋಹಿತ್, ತಲೆಗೆ ಟೋಪಿ ಹಾಕಿ ಮುಖಕ್ಕೆ ಕರವಸ್ತ್ರ ಕಟ್ಟಿ ಕನ್ನಡಕ ಹಾಕಿ ಮೀನು ಖರೀದಿಯ ನಾಟಕವಾಡಿದ್ದಾನೆ. ತನ್ನ ಬಳಿ ಮೀನು ಖರೀದಿಸಲು ಬಂದ ವ್ಯಕ್ತಿಯ ಹಾವಭಾವ ಗಮನಿಸಿದ ತಾಯಿಗೆ, ಇದು ತನ್ನ ಮಗನೇ ಎಂದು ಹೆತ್ತು ಕರುಳು ಹೇಳಿದೆ. ತಕ್ಷಣ ತನ್ನ ಮಗನನ್ನು ಬಿಗಿದಪ್ಪಿ ಆನಂದ ಬಾಷ್ಪ ಹರಿಸಿದ್ದಾರೆ. ಇದನ್ನೂ ಓದಿ: ಹರಿಪ್ರಸಾದ್ ಹೇಳಿಕೆಗೂ ಮೋದಿ ಮಧ್ಯ ಪ್ರವೇಶಿಸಬೇಕು: ಸಿಎಂಗೆ ಬಿಜೆಪಿ ಟ್ವೀಟ್ ಟಾಂಗ್
ಈ ಎಲ್ಲಾ ದೃಶ್ಯಗಳನ್ನು ರೋಹಿತ್ ಗೆಳೆಯ ದೂರದಿಂದಲೇ ವೀಡಿಯೋ ಮಾಡಿದ್ದು, ಸದ್ಯ ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಮೂರು ವರ್ಷಗಳ ಬಳಿಕ ಮುಖ ಮರೆಮಾಡಿಕೊಂಡು ಬಂದರೂ ತಾಯಿ ಮಗನನ್ನು ಗುರುತಿಸಿರುವುದನ್ನು ಕಂಡು ನೆಟ್ಟಿಗರು ವೀಡಿಯೋ ಶೇರ್ ಮಾಡುತ್ತಿದ್ದಾರೆ.
Web Stories