ಉಡುಪಿ: ದೇವಾಲಯಗಳ ನಗರ ಉಡುಪಿ ಒಂದು ಕ್ಷಣ ದ್ವಾರಕೆಯಾಗಿ ಮಾರ್ಪಾಟಾಗಿತ್ತು. ಒಂದು ತಕ್ಕಡಿಯಲ್ಲಿ ಭಗವಾನ್ ಶ್ರೀಕೃಷ್ಣ, ಮತ್ತೊಂದು ಭಾಗದಲ್ಲಿ ಚಿನ್ನದ ಆಭರಣಗಳು, ನಾಣ್ಯಗಳು. ದ್ವಾಪರದಲ್ಲಿ ಮುರಾರಿಯ ತುಲಾಭಾರ ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಕಲಿಯುಗದಲ್ಲಿ ಮಾತ್ರ ದೇವರ ತುಲಾಭಾರವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡಿದ್ದಾರೆ.
ದ್ವಾಪರ ಯುಗ ಹೇಗಿತ್ತೋ..? ದ್ವಾರಕೆಯ ನಗರ ಹೇಗಿತ್ತೋ ನೋಡಿದವರಿಲ್ಲ. ಪುರಾಣದ ಕಥೆಗಳಿಂದ ಆ ಕಾಲವನ್ನು ಇಮ್ಯಾಜಿನೇಶನ್ ಮಾಡಿಕೊಳ್ಳಬಹುದಷ್ಟೇ. ದ್ವಾರಕೆಯಲ್ಲಿ ಶ್ರೀಕೃಷ್ಣನಿಗೆ ಸತ್ಯಭಾಮೆ, ರುಕ್ಮಿಣಿ ಚಿನ್ನದ ಮತ್ತು ತುಳಸಿಯಲ್ಲಿ ತುಲಾಭಾರ ಮಾಡಿದ್ದರು. ಇದೀಗ ದೇವರಿಗೆ ಕಲಿಗಾಲದಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಮತ್ತೆ ತುಲಾಭಾರ ಸಂಪನ್ನಗೊಂಡಿದೆ.
ಪರ್ಯಾಯ ಪಲಿಮಾರು ಸ್ವಾಮೀಜಿ ಪೂಜಾಧಿಕಾರ ಮುಗಿಯಲು ಎರಡು ವಾರ ಇರುವಾಗ ಈ ಸಂಪ್ರದಾಯ ನೆರವೇರಿಸಿದ್ದಾರೆ. ಸತ್ಯಭಾಮೆ ಕೃಷ್ಣನಿಗೆ ಚಿನ್ನದ ತುಲಾಭಾರ ಮಾಡಿಸಿದ್ದಳಂತೆ. ಎಷ್ಟು ಚಿನ್ನ ಇಟ್ಟರೂ ಕೃಷ್ಣ ಕೂತ ತಕ್ಕಡಿ ಮೇಲೆ ಏಳಲೇ ಇಲ್ವಂತೆ. ಆ ಸಂದರ್ಭ ರುಕ್ಮಿಣಿ ದೇವಿ ಒಂದು ತುಳಸಿ ದಳವನ್ನು ತಕ್ಕಡಿಗೆ ಹಾಕಿದ್ದರಿಂದ ತುಲಾಭಾರ ಆಗಿತ್ತು. ಕೃಷ್ಣ ಕೂತ ತಕ್ಕಡಿ ತುಳಸಿಯಿಟ್ಟಾಗ ತೂಗಿದೆ.
ಉಡುಪಿಯಲ್ಲಿ ಚಿನ್ನ, ನಾಣ್ಯದ ಜೊತೆ ದೇವರಿಗೆ ಬಹಳ ಪ್ರಿಯವಾದ ಗೋಪಿ ಚಂದನದ ತುಂಡುಗಳನ್ನು ಇಟ್ಟು ತುಲಾಭಾರ ಮಾಡಲಾಯ್ತು. ರಥಬೀದಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ದೇವರ ತುಲಾಭಾರ ನೋಡಿದ್ರೆ ಪುಣ್ಯಪ್ರಾಪ್ತಿ ಎಂಬ ನಂಬಿಕೆಯೂ ಇದೆ. ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ತುಲಾಭಾರ ಹರಕೆ ರೂಪದಲ್ಲಿ, ಸೇವೆಯ ರೂಪದಲ್ಲಿ ನಡೆಯುತ್ತದೆ. ಕೃಷ್ಣನಿಗೆ ಚಿನ್ನದ ಗರ್ಭಗುಡಿ ಸೇವೆಯ ಅರ್ಥದಲ್ಲಿ ಇದನ್ನು ಆಯೋಜಿಸಲಾಗಿದ್ದು ಭಗವದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಪಲಿಮಾರು ಮಠದ ಕಾರ್ಯದರ್ಶಿ ಗಿರೀಶ್ ಆಚಾರ್ಯ ಮಾತನಾಡಿ, ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ದೇವರ ಮೇಲೆ ಭಕ್ತಿ ಹೆಚ್ಚಬೇಕೆಂದು ತುಲಾಭಾರ ಸೇವೆ ಹುಟ್ಟಿರಬೇಕು. ಭಗವಂತನಿಗಿಂತ ಶ್ರೇಷ್ಠ ಮತ್ತೊಂದಿಲ್ಲ ಎಂಬೂದು ಆಚರಣೆಯ ಉದ್ದೇಶ ಎಂದು ಹೇಳಿದರು.
ಈಗಿನ ಪರ್ಯಾಯ ಪಲಿಮಾರು ಸ್ವಾಮೀಜಿ ಕೃಷ್ಣಮಠದ ಗರ್ಭಗುಡಿಗೆ ಚಿನ್ನದ ಹಾಸು ಹೊದೆಸಿದ್ದರು. ಸುಮಾರು ಮೂರುವರೆ ಕೋಟಿ ರುಪಾಯಿ ಮೌಲ್ಯದ ಚಿನ್ನದ ತಗಡು ಕಡಿಮೆಯಾಗಿತ್ತು. ಆ ಯೋಜನೆ ಸರಿ ತೂಗಿಸಲು ತುಲಾಭಾರ ನಡೆಸಿದ್ದು ಎರಡು ಕೆಜಿಯಷ್ಟು ಮೌಲ್ಯದ ನಾಣ್ಯ, ಚಿನ್ನದ ತುಳಸಿದಳ ಸಂಗ್ರಹವಾಗಿದೆ. ಮುಂದಿನ ಎರಡು ವಾರದಲ್ಲಿ ಮತ್ತಷ್ಟು ಕನಕ ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಪಲಿಮಾರು ಮಠ ಹೇಳಿದೆ.