ಉಡುಪಿ: ಮುಂಗಾರು ಮಳೆಯ ಅಬ್ಬರದ ನಡುವಲ್ಲೇ ಉಡುಪಿ ಕೃಷ್ಣನ ಉತ್ಸವ ನಡೆದಿದೆ. ರಥಬೀದಿಯಲ್ಲಿ ಮೊಣಕಾಲುವರೆಗೆ ನೀರು ತುಂಬಿಕೊಂಡಿದ್ದು ಮಳೆನೀರಿನ ನಡುವೆ ಶ್ರೀಕೃಷ್ಣನನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡಲಾಯಿತು.
ಈ ಬಾರಿಯ ಬರಗಾಲದ ಬಿಸಿ ಶ್ರೀ ಕೃಷ್ಣ ಮಠಕ್ಕೂ ತಟ್ಟಿತ್ತು. ಮಠದ ಮಧ್ವ ಸರೋವರ ಬತ್ತಿ ಹೋಗಿತ್ತು. ಇಂದು ಬೆಳಗ್ಗೆ ಬೀಸಿದ ಭಾರೀ ಗಾಳಿ ಮಳೆ, ಕೃಷ್ಣ ದೇವರಿಗೂ ಹಿತಾನುಭವ ನೀಡಿದೆ. ರಾತ್ರಿಯ ಉತ್ಸವ ಆರಂಭವಾಗುವ ವೇಳೆಯಲ್ಲೇ ಭಾರೀ ಮಳೆ ಸುರಿಯಿತು. ಚಿನ್ನದ ರಥವೇರಿದ ಕೃಷ್ಣ ಮುಂಗಾರು ಮಳೆಗೆ ಮೈಯ್ಯೊಡ್ಡಿ ಮೆರಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
Advertisement
Advertisement
ಮೊದಲ ಮಳೆಯ ರೋಮಾಂಚನವನ್ನು ಶ್ರೀಕೃಷ್ಣನ ಜೊತೆ ನೂರಾರು ಭಕ್ತರು ಕೂಡಾ ಅನುಭವಿಸಿದರು. ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಮಳೆಯಲ್ಲಿ ನೆನೆಯುತ್ತಲೇ ಕೃಷ್ಣ ನನ್ನು ನೆನೆದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣಜಪ ಮಾಡಿ ರಥವೆಳೆದರು.
Advertisement
ಮೊದಲ ಮಳೆಯಾದ ಕಾರಣ ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಹರಿಯುವ ಜಲದ ನಡುವೆ ಹರಿಯ ರಥೋತ್ಸವ ಉತ್ಸವ ನಡೆದದ್ದು ವಿಶೇಷವೆನಿಸಿತು. ಇನ್ನಾದರೂ ಬರಗಾಲ ಕಳೆದು ಮುಂಗಾರು ಜನರನ್ನು ಹರಸಲಿ ಎಂದು ಭಕ್ತರು ಕೃಷ್ಣನನ್ನು ಬೇಡಿಕೊಂಡರು.
Advertisement
ಈ ಸಂದರ್ಭ ಮಾತನಾಡಿದ ಪರ್ಯಾಯ ಪಲಿಮಾರು ಸ್ವಾಮೀಜಿ, ಭಾಗೀರತಿ ಜನ್ಮದಿನದ ಈ ಉತ್ಸವ ಸದಾ ನೆನಪುಳಿಯುವಂತದ್ದು. ಜಲಧಾರೆ ದೇವರ ನೆತ್ತಿ ಮೇಲೆ ಸುರಿಯುತ್ತಿತ್ತು. ದೇವರು ರಥಬೀದಿಯಲ್ಲಿ ಉತ್ಸವ ಹೊರಟಿದ್ದ. ಈ ಬಾರಿ ಯಾರೂ ಚಿಂತಿಸುವ ಅಗತ್ಯವಿಲ್ಲ. ಜನ ಜಾನುವಾರುಗಳಿಗೆ ನೀರು. ರೈತರಿಗೆ ಉತ್ತಮ ಬೆಳೆ ಸಿಗಲಿದೆ. ಮಳೆಗಾಲದಲ್ಲಿ ನಿರಂತರ ಮಳೆಯಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.